×
Ad

ಆದೇಶ ಪಾಲಿಸದಿದ್ದಲ್ಲಿ ಕಾನೂನು ಕ್ರಮ: ಡಿಸಿ ಡಾ. ರಾಜೇಂದ್ರ

Update: 2020-08-18 22:43 IST

ಮಂಗಳೂರು, ಆ.18: ಕೋವಿಡ್-19ರ ಸಂಬಂಧ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡವರು ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ-ವಹಿವಾಟು ಮುಂದುವರಿಸಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಆದೇಶ ಪಾಲಿಸದೇ ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಅಂತಹವರ ವಿರುದ್ಧ ಭಾರತೀಯ ದಂಡ ಸಂಹಿತೆ 1860ರ ಕಲಂ 188ರ ಅನ್ವಯ ಹಾಗೂ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಕೇಂದ್ರ ಮಾರುಕಟ್ಟೆಯಲ್ಲಿ ಪ್ರಸ್ತುತ ವರ್ತಕರು ತಮ್ಮ ಅಂಗಡಿಯಲ್ಲಿ ವ್ಯವಹಾರ ಮುಂದುವರಿಸುತ್ತಿರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆ ಯಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿದೆ. ಕೋವಿಡ್ ಸಂಬಂಧ ಸುರಕ್ಷಿತ ಅಂತರ ಕಾಯ್ದು ಕೊಳ್ಳಲು ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮದ ಕುರಿತು ಸೋಮವಾರವಷ್ಟೇ (ಆ.17) ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಕೇಂದ್ರ ಮಾರುಕಟ್ಟೆಯ ಸ್ಥಳದ ರಸ್ತೆಗಳು ಇಕ್ಕಟ್ಟಿನಿಂದ ಕೂಡಿದ್ದು, ವಾಹನ-ಜನ ದಟ್ಟಣೆಯಿಂದ ಸುರಕ್ಷಿತ ಅಂತರ ಕಾಪಾಡುವುದು ಕಷ್ಟಸಾಧ್ಯ. ಟ್ರಾಫಿಕ್ ಸಂಚಾರ ಕೂಡ ಕಷ್ಟಕರ. ಸುರಕ್ಷಿತ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಸ್ಥಳದ ಕೊರತೆಯಿಂದಾಗಿ ವಾಹನ ನಿಲುಗಡೆ ಕಷ್ಟ. ರಾಜ್ಯ, ಅಂತರ್‌ರಾಜ್ಯಗಳಿಂದ ಹಣ್ಣು-ಹಂಪಲು, ತರಕಾರಿ, ಇತರ ವ್ಯಾಪಾರ-ವಹಿವಾಟುಗಳ ಸಂಬಂಧ ನೂರಾರು ವಾಹನಗಳು ಬಂದು ಹೋಗುತ್ತಿವೆ. ಇಲ್ಲಿ 1,500 ರಿಂದ 2,000ದಷ್ಟು ಹಮಾಲರು, ವ್ಯಾಪಾರಸ್ಥರಿದ್ದು, ಸುರಕ್ಷಿತ ಅಂತರ ಕಾಪಾಡುವುದು ಕಷ್ಟಸಾಧ್ಯ. ಇದರಿಂದ ಕೋವಿಡ್ ಶೀಘ್ರವಾಗಿ ಹರಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು, ಮಾಲಕರು, ಕೂಲಿಕಾರ್ಮಿಕರು, ಗ್ರಾಹಕರನ್ನು ಒಳಗೊಂಡಂತೆ ಮುಖಗವಸು ಆಗಲಿ, ಫೇಸ್‌ಶೀಲ್ಡ್‌ಗಳನ್ನು ಧರಿಸುತ್ತಿರುವುದು ಕಂಡುಬರುತ್ತಿಲ್ಲ. ಧರಿಸಿದ್ದರೂ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ. ಕೇಂದ್ರ ಮಾರುಕಟ್ಟೆಯಲ್ಲಿರುವ ಮಾಂಸದ ಅಂಗಡಿಗಳಿಗೆ ಸಮರ್ಪಕವಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಶುಚಿತ್ವ ಕಾಪಾಡುವುದು ಕಷ್ಟಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News