ಜೈಪುರ, ಗುವಾಹಟಿ, ತಿರುವನಂತಪುರಂ ವಿಮಾನ ನಿಲ್ದಾಣ ಲೀಸ್‌ಗೆ ನೀಡಲು ಸಂಪುಟ ಒಪ್ಪಿಗೆ

Update: 2020-08-19 15:14 GMT

ಹೊಸದಿಲ್ಲಿ, ಆ.19: ಜೈಪುರ, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಸರಕಾರಿ-ಖಾಸಗಿ ಸಹಭಾಗಿತ್ವ(ಪಿಪಿಪಿ)ದ ಮೂಲಕ ಲೀಸ್‌ಗೆ ನೀಡುವ ಪ್ರಸ್ತಾವನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ದಿಲ್ಲಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಲಕ್ನೊ, ಅಹ್ಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರಂ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ಲೀಸ್ ಮೇಲೆ ನಿರ್ವಹಿಸುವ ಹಕ್ಕನ್ನು ಅದಾನಿ ಎಂಟರ್‌ಪ್ರೈಸಸ್ ಪಡೆದುಕೊಂಡಿದೆ. ಪಿಪಿಪಿ ಸ್ವರೂಪದಡಿ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಹಕ್ಕನ್ನು 2019ರ ಫೆಬ್ರವರಿಯಲ್ಲಿ ಸ್ಪರ್ಧಾತ್ಮಕ ಟೆಂಡರ್ ಪ್ರಕ್ರಿಯೆಯ ಮೂಲಕ ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಈ ಆರು ವಿಮಾನನಿಲ್ದಾಣಗಳು ವಿಮಾನ ನಿಲ್ದಾಣ ಪ್ರಾಧಿಕಾರದ ಒಡೆತನದಲ್ಲಿದೆ. ಅಹ್ಮದಾಬಾದ್, ಮಂಗಳೂರು ಮತ್ತು ಲಕ್ನೋ ವಿಮಾನ ನಿಲ್ದಾಣಗಳ ನಿರ್ವಹಣೆ ಹಕ್ಕು ಹಸ್ತಾಂತರದ ಬಗ್ಗೆ 2020ರ ಫೆಬ್ರವರಿ 14ರಂದು ಅದಾನಿ ಸಂಸ್ಥೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. ಟೆಂಡರ್‌ನಲ್ಲಿ ಹಕ್ಕು ಪಡೆದ ಅದಾನಿ ಎಂಟರ್‌ಪ್ರೈಸಸ್, ಈ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು 2020ರ ಆಗಸ್ಟ್ 12ರ ಒಳಗೆ ಪಡೆದುಕೊಳ್ಳಬೇಕು ಎಂದು ಟೆಂಡರ್‌ನಲ್ಲಿ ಷರತ್ತು ವಿಧಿಸಲಾಗಿತ್ತು. ಆದರೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ಗಡುವನ್ನು ನವೆಂಬರ್ 12ಕ್ಕೆ ವಿಸ್ತರಿಸಲಾಗಿದೆ.

ಈ ಮಧ್ಯೆ, ಇನ್ನಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣ ಕೋರಿ ನಾಗರಿಕ ವಿಮಾನಯಾನ ಸಚಿವಾಲಯ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಇಲಾಖೆಯ ಸಚಿವ ಹರ್ದೀಪ್‌ಸಿಂಗ್ ಪುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News