×
Ad

ಕೆಎಸ್‌ಎಫ್‌ಸಿಗೆ 44.92 ಕೋಟಿ ರೂ. ಲಾಭ ದಾಖಲು

Update: 2020-08-19 20:45 IST

ಉಡುಪಿ, ಆ.19: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2019-20ರ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 667.81 ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಿದೆ. 727.90ಕೋಟಿ ರೂ.ಗಳನ್ನು ವಿತರಣೆ ಮಾಡಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಒಟ್ಟು 720.85 ಕೋಟಿ ರೂ. ಗಳನ್ನು ವಸೂಲಾತಿ ಮಾಡಲಾಗಿದೆ. ಈ ಮೂಲಕ ಪ್ರಸ್ತುತ ವರ್ಷದಲ್ಲಿ ಸಂಸ್ಥೆಯು 44.92 ಕೋಟಿ ರೂ.ಗಳಷ್ಟು ಲಾಭ ಗಳಿಸಿದೆ ಎಂದು ಕೆಎಸ್‌ಎಫ್‌ಸಿ ಪ್ರಕಟಣೆ ತಿಳಿಸಿದೆ.

ಅಲ್ಲದೇ ಶೇಕಡವಾರು ಅನುತ್ಪಾದಕ ನಿವ್ವಳ ಆಸ್ತಿಯು ಕಳೆದ ವರ್ಷದ ಶೇ. 6.09ರಿಂದ ಪ್ರಸ್ತುತ ವರ್ಷದಲ್ಲಿ ಶೇ.5.12ಕ್ಕೆ ಇಳಿದಿದೆ. ಮಾರ್ಚ್ ತಿಂಗಳ 31ರವರೆಗೆ ಸಂಸ್ಥೆಯ ಸಂಚಿತ ಮಂಜೂರಾತಿ 1,74,217 ಕೈಗಾರಿಕಾ ಘಟಕ ಗಳಿಗೆ 17,884.72 ಕೋಟಿ ರೂ.ಗಳಾಗಿವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಏಕರೂಪ್ ಕೌರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ 61ನೇ ವಾರ್ಷಿಕ ಮಹಾಸಭೆ ಯಲ್ಲಿ ವೀಡಿಯೋ ಕಾನ್ಪರೆನ್ಸ್ ಮುಖಾಂತರ ಸಂಸ್ಥೆಯ ಷೇರುದಾರರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಸಂಸ್ಥೆಯು ಈಗಾಗಲೇ 21,700 ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿ ಗಳಿಗೆ 2000 ಕೋಟಿ ರೂ.ಗಳಿಗೂ ಅಧಿಕ ಸಾಲದ ನೆರವನ್ನು ನೀಡಿದೆ. ಅಲ್ಲದೇ ಈವರೆಗೆ 30,000ಕ್ಕೂ ಅಧಿಕ ಮಹಿಳಾ ಉದ್ಯಮದಾರರಿಗೆ 4243.67 ಕೋಟಿ ರೂ.ಗಳ ಅವಧಿ ಸಾಲ ಮಂಜೂರು ಮಾಡಿದೆ. 41,000 ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಉದ್ಯಮಿಗಳಿಗೆ ಇದುವರೆಗೂ 1748.40 ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದೆ. ಮೊದಲ ಪೀಳಿಗೆ ಉದ್ಯಮದಾರರಿಗೆ 164.70 ಕೋಟಿ ರೂ.ಗ ಸಾಲ ಮಂಜೂರು ಮಾಡಿದೆ ಎಂದರು.

ಸಂಸ್ಥೆ ಕೈಗೊಂಡಿರುವ ಹಲವಾರು ಉಪಕ್ರಮಗಳು ಹಾಗೂ ಪ್ರಮುಖ ಯೋಜನೆಗಳಾದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಹಾಗೂ ಎಲ್ಲಾ ವರ್ಗದ ಉದ್ಯಮಿಗಳಿಗೆ ಲಭ್ಯವಿರುವ ಶೇ.4ರ ನಿವ್ವಳ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಸಂಸ್ಥೆ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಪ್ರಸ್ತುತ ಹಣಕಾಸು ವರ್ಷದಲ್ಲಿ ಕರ್ನಾಟಕ ಸರಕಾರವು ಸಂಸ್ಥೆಗೆ 100 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಹಾಗೂ 71.50 ಕೋಟಿ ರೂ.ಗಳ ಬಡ್ಡಿ ಸಹಾಯಧನದ ನೆರವನ್ನು ಒದಗಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸು ಯೋಜನೆಯಡಿಯಲ್ಲಿ ಕರ್ನಾಟಕ ಸರಕಾರ 20.12 ಕೋಟಿ ರೂ. ಗಳ ಅನುದಾನ ಬಿಡುಗಡೆ ಮಾಡಿದೆ ಎಂದವರು ವಿವರಿಸಿದರು.

2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಂಸ್ಥೆಯು 600 ಕೋಟಿ ರೂ. ಗಳ ಮಂಜೂರಾತಿ ಗುರಿಯನ್ನು ಹೊಂದಿದೆ. ರಾಜ್ಯ ಸರಕಾರ ಬಡ್ಡಿ ಸಹಾಯಧನ ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಎಂಎಸ್‌ಎಂಇಗಳಿಗೆ ಪರಿಷ್ಕೃತ ನಿರೂಪಣೆ ಜು.1ರಿಂದ ಜಾರಿಗೊಂಡಿದೆ. ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಕೆಎಸ್‌ಎಫ್‌ಸಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News