ನ್ಯಾಯಾಂಗ ನಿಂದನೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಪ್ರಶಾಂತ್ ಭೂಷಣ್

Update: 2020-08-19 15:37 GMT

ಹೊಸದಿಲ್ಲಿ, ಆ.19: ಅವಹೇಳನಾತ್ಮಕ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆ ಎಸಗಿದ ಪ್ರಕರಣದಲ್ಲಿ ತಾನು ತಪ್ಪಿತಸ್ತ ಎಂಬ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಿದ್ದು, ಅದುವರೆಗೆ ಶಿಕ್ಷೆಯ ಪ್ರಮಾಣ ಘೋಷಿಸುವ ಕಲಾಪವನ್ನು ನಡೆಸಬಾರದು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಂಗದ ವಿರುದ್ಧ ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟ್‌ ಗಳು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಾಡಿರುವ ಟೀಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಆಗಸ್ಟ್ 14ರಂದು ಹೇಳಿದ್ದ ಸುಪ್ರೀಂಕೋರ್ಟ್, ಭೂಷಣ್ ವಿರುದ್ಧದ ಆರೋಪವನ್ನು ಎತ್ತಿಹಿಡಿದಿತ್ತು. ಈ ಪ್ರಕರಣದಲ್ಲಿ ಭೂಷಣ್‌ಗೆ ನೀಡುವ ಶಿಕ್ಷೆಯ ಪ್ರಮಾಣ ನಿರ್ಧರಿಸುವ ವಿಚಾರಣೆಯನ್ನು ಆಗಸ್ಟ್ 20ರಂದು ನಡೆಸುವುದಾಗಿ ಹೇಳಿತ್ತು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳ ಸರಳ ಜೈಲುಶಿಕ್ಷೆ ಅಥವಾ 2,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ನ್ಯಾಯಾಲಯದ ಆಗಸ್ಟ್ 14ರ ಆದೇಶವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಮತ್ತು ಈ ವಿಷಯದಲ್ಲಿ ವಾದಿಸಲು ಸೂಕ್ತ ನ್ಯಾಯವಾದಿಯನ್ನು ಗೊತ್ತುಪಡಿಸಿದ ಬಳಿಕ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ಪ್ರಶಾಂತ್ ಭೂಷಣ್ ಸರ್ವೋಚ್ಛ ನ್ಯಾಯಾಲಯಕ್ಕೆ ತಿಳಿಸಿದ್ದಾರೆ .

2013ರ ಸುಪ್ರೀಂಕೋರ್ಟ್ ಕಾಯಿದೆಯ 47ನೇ ಆದೇಶದ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಅರ್ಜಿದಾರರು ತೀರ್ಪು ಹೊರಬಿದ್ದ 30 ದಿನದೊಳಗೆ ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 20ಕ್ಕೆ ನಿಗದಿಯಾಗಿರುವ ಶಿಕ್ಷೆಯ ಪ್ರಮಾಣ ನಿರ್ಧರಿಸುವ ಕಲಾಪವನ್ನು ಮುಂದೂಡುವಂತೆ ಭೂಷಣ್ ಕೋರಿದ್ದಾರೆ. ನಾಗರಿಕನ ಸ್ವಾತಂತ್ರ್ಯವನ್ನು ಕಾಪಾಡುವಲ್ಲಿ ಆಧಾರವಾಗಿರುವ ಸಾರ್ವಜನಿಕ ನೀತಿಯನ್ನು ಗಮನದಲ್ಲಿಟ್ಟುಕೊಂಡು , ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವವರೆಗೆ ಕಲಾಪ ಮುಂದೂಡುವುದು ನ್ಯಾಯದ ಹಿತಾಸಕ್ತಿಗೆ ಪೂರಕವಾಗಿದೆ ಎಂದು ನ್ಯಾಯವಾದಿ ಕಾಮಿನಿ ಜೈಸ್ವಾಲ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಭೂಷಣ್ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 19(1)ರ ಪ್ರಕಾರ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ತ ಎಂದು ಹೈಕೋರ್ಟ್ ನೀಡುವ ತೀರ್ಪನ್ನು ಪ್ರಶ್ನಿಸಲು ಆರೋಪಿಗೆ ಶಾಸನಬದ್ಧ ಹಕ್ಕು ನೀಡಲಾಗಿದೆ. ಆದರೆ ಸುಪ್ರೀಂಕೋರ್ಟ್ ನೀಡುವ ಆದೇಶವನ್ನು ಪ್ರಶ್ನಿಸಲು ಸಾಧ್ಯವಿಲ್ಲದಿರುವುದರಿಂದ ನ್ಯಾಯವನ್ನು ಒದಗಿಸಲಾಗಿದೆಯೇ ಎಂಬುದನ್ನು ಎರಡು ಬಾರಿ ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಭೂಷಣ್ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News