ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ಪರೀಕ್ಷೆ ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ ರಚನೆಗೆ ನಿರ್ಧಾರ

Update: 2020-08-19 16:21 GMT

ಹೊಸದಿಲ್ಲಿ, ಆ.19: ಉದ್ಯೋಗಾಕಾಂಕ್ಷಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ(ಎನ್‌ಆರ್‌ಎ)ಯನ್ನು ರಚಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೇಂದ್ರ ಸರಕಾರದಡಿ ಈಗ 20ಕ್ಕೂ ಹೆಚ್ಚು ನೇಮಕಾತಿ ಸಂಸ್ಥೆಗಳಿವೆ. ಆದರೆ ಈಗ ಯುವಜನತೆಗೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ ಒಂದೇ ನೇಮಕಾತಿ ಸಂಸ್ಥೆ ರಚಿಸಲಾಗುವುದು. ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ಪ್ರಥಮ ಹಂತದ ಪರೀಕ್ಷೆ, ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ, ಬ್ಯಾಂಕಿಂಗ್ ಸೇವಾ ಸಿಬಂದಿ ಸಂಸ್ಥೆ(ಐಬಿಪಿಎಸ್) ನಡೆಸುವ ಪರೀಕ್ಷೆಯನ್ನು ಬಹು ಏಜೆನ್ಸಿ ಸಂಸ್ಥೆಯಾಗಿರುವ ಎನ್‌ಆರ್‌ಎ ನಿರ್ವಹಿಸಲಿದೆ. ಈ ಮೂರೂ ಸಂಸ್ಥೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಪ್ರಥಮ ಹಂತದ ಪರೀಕ್ಷೆಯನ್ನು ಎನ್‌ಆರ್‌ಎ ನಡೆಸುತ್ತದೆ. ಈ ಪರೀಕ್ಷೆ ಆನ್‌ಲೈನ್ ಮೂಲಕ ನಡೆಯಲಿದೆ ಎಂದು ಬುಧವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಜಾವಡೇಕರ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಹಣಕಾಸು ನಿಗಮ ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮಗಳಿಂದ ವಿದ್ಯುತ್ ಸರಬರಾಜು ಸಂಸ್ಥೆ(ಡಿಸ್ಕಾಂ)ಗಳಿಗೆ ಹೆಚ್ಚುವರಿ ಸಾಲ ನೀಡಲು ಒಂದು ಬಾರಿಯ ರಿಯಾಯಿತಿ ಯೋಜನೆಯಡಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದೂ ಸಚಿವರು ಹೇಳಿದ್ದಾರೆ.

ಪ್ರಥಮ ಹಂತದ ಬಿಡ್‌ನಲ್ಲಿ

ಆರೂ ವಿಮಾನ ನಿಲ್ದಾಣದ ಹಕ್ಕು ಪಡೆದ ಅದಾನಿ ಸಂಸ್ಥೆ ಕೇಂದ್ರ ಸರಕಾರ ಈ ಹಿಂದೆ 12 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ನಿರ್ಧರಿಸಿತ್ತು. ಈ ಪ್ರಕಾರ ಮೊದಲ ಹಂತದಲ್ಲಿ 6 ವಿಮಾನನಿಲ್ದಾಣಗಳ ಖಾಸಗೀಕರಣಕ್ಕೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಸಮೂಹ ಸಂಸ್ಥೆ ಅತ್ಯಧಿಕ ಮೊತ್ತ ನಮೂದಿಸುವ ಮೂಲಕ ಗೆದ್ದುಕೊಂಡಿದೆ ಎಂದು ಸರಕಾರ ಹೇಳಿದೆ. ಲಕ್ನೋ, ಅಹ್ಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರಂ ಮತ್ತು ಗುವಾಹಟಿ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕನ್ನು ಅದಾನಿ ಸಂಸ್ಥೆ ಪಡೆದಿದೆ.

ಇದರಲ್ಲಿ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯ ಹಕ್ಕನ್ನು ಅದಾನಿ ಸಂಸ್ಥೆಗೆ ವಹಿಸುವ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News