ಪ್ರೌಢ ಶಿಕ್ಷಣ ಮಂಡಳಿಯ ಎಡವಟ್ಟು: ಕನ್ನಡದಲ್ಲಿ 114 ಅಂಕ ಗಳಿಸಿದರೂ ವಿದ್ಯಾರ್ಥಿನಿ ಅನುತ್ತೀರ್ಣ!
ಮಂಗಳೂರು, ಆ.19: ಆತೂರು ಬದ್ರಿಯ ವಿದ್ಯಾಸಂಸ್ಥೆಯ 2019 -20ನೇ ಸಾಲಿನ ಎಸೆಸೆಲ್ಸಿಯ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕಗಳೊಂದಿಗೆ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಡವಟ್ಟಿನಿಂದ ಅನುತ್ತೀರ್ಣಳಾಗಿದ್ದಾಳೆ.
ಪ್ರೌಢ ಶಿಕ್ಷಣ ಮಂಡಳಿಯ ಈ ಬೇಜವಾಬ್ದಾರಿತನದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಮಾನಸಿಕವಾಗಿ ತೀರಾ ಕುಗ್ಗಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಐದು ವಿಷಯಗಳಲ್ಲಿ ಒಳ್ಳೆಯ ಅಂಕವನ್ನು ಗಳಿಸಿದ ವಿದ್ಯಾರ್ಥಿನಿ ಕನ್ನಡ ವಿಷಯದಲ್ಲಿ ತುಂಬಾ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಮಂಡಳಿ ಪ್ರಕಟಿಸಿತ್ತು. ಆದರೆ ಕನ್ನಡದಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದ ವಿದ್ಯಾರ್ಥಿನಿ ಈ ಫಲಿತಾಂಶ ನೋಡಿ ಆಘಾತಕ್ಕೊಳಗಾಗಿದ್ದಳು. ಈ ಹಿನ್ನೆಲೆಯಲ್ಲಿ ಕನ್ನಡ ವಿಷಯದ ಉತ್ತರ ಪತ್ರಿಕೆಯ ಪ್ರತಿಯನ್ನು ತರಿಸಿಕೊಂಡಾಗ ಅದರಲ್ಲಿ ವಿದ್ಯಾರ್ಥಿನಿ ಗಳಿಸಿರುವ ಅಂಕ 125ರಲ್ಲಿ 114 ಆಗಿರುವುದು ಕಂಡುಬಂದಿದೆ. ಪರೀಕ್ಷಾ ಮಂಡಳಿಯು ಅಂಕವನ್ನು ನಮೂದಿಸುವ ಕಾಲಂನಲ್ಲಿ ಒಟ್ಟು ಅಂಕಗಳನ್ನು ದಾಖಲಿಸುವ ಬದಲು ವಿದ್ಯಾರ್ಥಿನಿ ಪರೀಕ್ಷೆ ಬರೆದಿರುವಂತಹ ಉತ್ತರ ಪತ್ರಿಕೆಯ ಒಟ್ಟು ಪುಟಗಳ ಸಂಖ್ಯೆ 22 ಎಂಬುದನ್ನು ನಮೂದಿಸಿ ನಿರ್ಲಕ್ಷ ವಹಿಸಿರುವುದು ಸ್ಪಷ್ಟವಾಗಿದೆ. ಇದು ಮಾತ್ರವಲ್ಲದೆ ವಿದ್ಯಾರ್ಥಿನಿಯು ಗಳಿಸಿದ ಒಟ್ಟು ಅಂಕ 87 ಎಂದು ನಮೂದಿಸಿದೆ. ಆದರೆ ಒಟ್ಟು ಅಂಕವನ್ನು ಕೂಡಿಸಿದಾಗ 90 ಅಂಕ ವಿದ್ಯಾರ್ಥಿನಿಗೆ ಸಿಗಬೇಕಿತ್ತು. ಇಲ್ಲೂ 3 ಅಂಕಗಳ ವ್ಯತ್ಯಾಸವಾಗಿದೆ. ವಿದ್ಯಾರ್ಥಿನಿ ಒಟ್ಟು ಗಳಿಸಿದ ಅಂಕ 90 ಆಗಿದ್ದು, ಶಾಲೆಯಿಂದ ನೀಡಿದ ಇಂಟರ್ನಲ್ ಮಾರ್ಕ್ಸ್ 24 ಒಟ್ಟು ಸೇರಿದರೆ 114 ಅಂಕಗಳನ್ನು ಗಳಿಸಿರುವುದು ತಿಳಿದುಬರುತ್ತದೆ. ಪರೀಕ್ಷಾ ಮಂಡಳಿಯ ಈ ಎರಡು ಎಡವಟ್ಟನಿಂದ ಪ್ರತಿಭಾನ್ವಿತ ಈ ವಿದ್ಯಾರ್ಥಿನಿ ಮಾನಸಿಕವಾಗಿ ತೀರಾ ನೊಂದಿದ್ದಾಳೆ. ತಪ್ಪಿತಸ್ಥರ ವಿರುದ್ಧ ಪೋಷಕರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳದುಬಂದಿದೆ.