ಮಂಗಳೂರು : ವೃದ್ಧೆಯ ಚಿನ್ನಾಭರಣ ಕಳವು ; ರಿಕ್ಷಾ ಚಾಲಕ ಬಂಧನ
ಮಂಗಳೂರು, ಆ.19: ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಲ್ಲಿ ರಿಕ್ಷಾ ಚಾಲಕನೋರ್ವ ನನ್ನು ಉರ್ವ ಪೊಲೀಸರು ಬುಧವಾರ ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಶಕ್ತಿನಗರ ನಿವಾಸಿ ಪ್ರವೀಣ್ ರಾಮನಾಯ್ಕಿ (40) ಬಂಧಿತ ಆರೋಪಿ.
ವೃತ್ತಿಯಲ್ಲಿ ಈತ ರಿಕ್ಷಾ ಚಾಲಕ ಎಂದು ತಿಳಿದು ಬಂದಿದೆ. ಜೂ.7ರಂದು ಚಿಲಿಂಬಿಯ ದೇವಸ್ಥಾನವೊಂದರ ಬಳಿ 72 ವರ್ಷದ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಈತ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಎಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನಿಂದ 4.32 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಚಿನ್ನಾಭರಣವನ್ನು ಫಳ್ನೀರ್‌ನಲ್ಲಿನ ಬ್ಯಾಂಕ್‌ವೊಂದರಲ್ಲಿ ಅಡಮಾನ ಇರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉರ್ವ ಠಾಣೆಯ ಪೊಲೀಸ್ ನಿರೀಕ್ಷಕ ಮುಹಮ್ಮದ್ ಶರೀಫ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಸೈ ಶ್ರೀಕಲಾ, ಎಎಸ್ಸೈ ಬಾಲಕೃಷ್ಣ, ಸಿಬ್ಬಂದಿಯಾದ ಪ್ರಕಾಶ್, ಬಸವರಾಜ್ ಬಿರಾದಾರ್ ಪಾಲ್ಗೊಂಡಿದ್ದರು.