ರಾಜ್ಯ ಸರಕಾರದಿಂದ ಕೊರೋನ ನಿಯಂತ್ರಣ ಹೆಸರಲ್ಲಿ 3000 ಕೋಟಿ ರೂ. ಭ್ರಷ್ಟಾಚಾರ: ಮಾಜಿ ಸಚಿವ ಅಭಯಚಂದ್ರ ಆರೋಪ

Update: 2020-08-20 08:53 GMT

ಮುಲ್ಕಿ :  ಬಿಜೆಪಿ ರಾಜ್ಯ ಸರಕಾರ ಕಳೆದ ಕೆಲ ತಿಂಗಳಿನಿಂದ ಕೊರೋನ ನಿಯಂತ್ರಣದ ಹೆಸರಿನಲ್ಲಿ ಸುಮಾರು 3,000 ಕೋಟಿ ರೂ.ಗಳ ಬೃಹತ್ ಭ್ರಷ್ಟಾಚಾರ ನಡೆಸಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಗಂಭೀರ ಆರೋಪ ಮಾಡಿದ್ದಾರೆ.

ಅವರು ಗುರುವಾರ  ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸ್ ಅವರ ಜನ್ಮದಿನಾಚರಣೆ ಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ದೇಶನದಂತೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿ ನಾಯಕತ್ವದ ಕರ್ನಾಟಕ ಸರ್ಕಾರ ಕೊರೋನ ನಿಯಂತ್ರಣದಲ್ಲಿ ನಡೆಸಿದ ಭ್ರಷ್ಟಾಚಾರ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೈಗಾರಿಕಾ ವಿವಾದ ಕಾಯ್ದೆ ತಿದ್ದುಪಡಿ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ವಿರೋಧಿಸಿ ಮತ್ತು ಅತಿವೃಷ್ಟಿ ನಿರ್ವಹಣೆಯಲ್ಲಿ ವೈಫಲ್ಯ ಗಳ  ವಿರುದ್ಧ 'ಜನಧ್ವನಿ' ಮೂಲಕ ಮುಲ್ಕಿ ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೋವಿಡ್ 19ನಿಂದ ಎಲ್ಲಾ ಉದ್ಯಮಗಳು ಕೈ ಕೊಟ್ಟಿದ್ದು , ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದ್ದರೂ ಯಾವುದನ್ನೂ  ಲೆಕ್ಕಿಸದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಬಿಜೆಪಿ ಸರಕಾರ ಆಪರೇಷನ್ ಕಮಲ ಮಾಡುವ ಮುಖಾಂತರ ಭ್ರಷ್ಟಾಚಾರದ ಮೂಲಕವೇ ಆಡಳಿತಕ್ಕೆ ಬಂದು ಲಜ್ಜೆಗೇಡಿತನದ ರಾಜಕಾರಣ ನಡೆಸಿದೆ. ಆಡಳಿತದ ಪ್ರತಿಯೊಂದರಲ್ಲಿಯೂ ಭ್ರಷ್ಟಾಚಾರ ನಡೆಸುತ್ತಿರುವ ಬಿಜೆಪಿಗರಿಗೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು. ಕೋವಿಡ್ 19 ನಿಯಂತ್ರಣದ ವಸ್ತುಗಳನ್ನು ಖರೀದಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಬಿಜೆಪಿ ಸರಕಾರದ ವಿರುದ್ಧ ತನಿಖೆ ನಡೆಸಬೇಕೆಂದೂ ಒತ್ತಾಯಿಸಿದರು.

ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ, ರಾಜ್ಯಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ  ತಹಶೀಲ್ದಾರ್ ಗಳ ಸಭೆಯನ್ನು ಸರಕಾರ ಆಯೋಜಿಸಿ ಪ್ರತಿಭಟನೆ ಹಿನ್ನಡೆಗೆ ಕುತಂತ್ರ ರಾಜಕಾರಣ ನಡೆಸಿದೆ ಎಂದು ಆರೋಪಿಸಿದರು. ಬಳಿಕ ಮುಲ್ಕಿ ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಕಂದಾಯ ನಿರೀಕ್ಷಕ  ದಿಲೀಪ್ ರೊಡ್ಕರ್ ರವರಿಗೆ ಮನವಿ ಸಲ್ಲಿಸಲಾಯಿತು.

ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ನಾಯಕರಾದ ಮಯ್ಯದ್ದಿ ಪಕ್ಷಿಕೆರೆ, ಫಿಲೋಮಿನಾ ಸಿಕ್ವೇರಾ, ಧರ್ಮಾನಂದ ತೋಕೂರು, ಕುಳಾಯಿ ಬಶೀರ್, ಮಂಜುನಾಥ ಕಂಬಾರ, ಭೀಮಾಶಂಕರ, ಧನರಾಜ್ ಸಸಿಹಿತ್ಲು, ವೀರಯ್ಯ ಹಿರೇಮಠ, ಪದ್ಮಾವತಿ ಶೆಟ್ಟಿ, ವಹೀದಾ ಬಾನು, ಮುನ್ನ ಯಾನೆ ಮಹೇಶ, ಬಂದಗಿ ಸಾಬ್ ಕೆ.ಎಸ್ . ರಾವ್ ನಗರ, ಅಬ್ದುಲ್ ಅಝೀಝ್ ಹಳೆಯಂಗಡಿ, ಶಂಕರ್ ಪಡಂಗ, ಅನಿಲ್ ಸಸಿಹಿತ್ಲು, ಜಾಕ್ಸನ್ ಪಕ್ಷಿಕೆರೆ, ದಯಾನಂದ ಮಟ್ಟು, ಸಮೀರ್ ಕೆ.ಎಸ್ .ರಾವ್ ನಗರ , ಸುನಿತಾ ಕಿನ್ನಿಗೋಳಿ, ರಕ್ಷಿತ್ ಕೊಳಚಿಕಂಬಳ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News