ಮಂಗಳೂರು ವಿವಿಯಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ

Update: 2020-08-20 11:32 GMT

ಕೊಣಾಜೆ: ಮಂಗಳೂರು ವಿವಿಯ ಎನ್.ಜಿ.ಪಾವಂಜೆ ಪೀಠ ಇದರ ಆಶ್ರಯದಲ್ಲಿ ರಾಯನಮನೆ ಫೊಟೋಗ್ರಾಫಿಕ್ ಫೌಂಡೇಶನ್ ಪುತ್ತೂರು ಇವರ ಸಹಯೋಗದೊಂದಿಗೆ  ಜಾಲತಾಣದಲ್ಲಿ  ವಿಶ್ವಛಾಯಾಗ್ರಾಹಕರ ದಿನಾಚರಣೆಯ ಅಂಗವವಾಗಿ ನಡೆದ ವರ್ಣ ಚಿತ್ರ ಸೃಜನ, ವಿಶೇಷ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಬುಧವಾರ ಮಂಗಳೂರು ವಿವಿಯಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಅವರು ಮಾತನಾಡಿ,
ನಾವು ಕಲೆಯೊಂದಿವಗೆ ಪರಿಶ್ರಮ, ಏಕಾಗ್ರತೆ ಮತ್ತು ಆಸಕ್ತಿಯೊಂದಿಗೆ ತೊಡಗಿಸಿಕೊಂಡರೆ ನೈಜವಾದ ಕಲಾಶಕ್ತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಕಲೆಯನ್ನು ನಾವು ಮೈಗೂಡಿಸಿಕೊಳ್ಳಬೇಕಾದರೆ ಕ್ರಿಯಾತ್ಮಕ, ಗುಣಾತ್ಮಕ ಮತ್ತು ಕಲಾತ್ಮಕ ಅಂಶಗಳು ನಮ್ಮಲ್ಲಿರಬೇಕು. ಛಾಯಾಗ್ರಹಣವೂ ವಿಶೇಷವಾದ ಕಲೆಯಾಗಿದ್ದು ಯುವ ಜನಾಂಗ ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು  ಹೇಳಿದರು.

ವಿಶ್ವವಿದ್ಯಾಲಯದಲ್ಲಿ ವಿಶೇಷವಾಗಿ ಲಲಿತ ಕಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು, ಕಾರ್ಯಕಮಗಳು ಹೆಚ್ಚೆಚ್ಚು ನಡೆಯಬೇಕಿದ್ದು, ಮಂಗಳೂರು ವಿವಿಯಲ್ಲಿ ಎನ್. ಜಿ.ಪಾವಂಜೆ ಅವರ ನೆನಪಿನಲ್ಲಿ ಅವರ ಪುತ್ರಿ ಅನುಸೂಯ ಮೇಡಂ  ಅವರ ಪ್ರಾಯೋಜಕತ್ವದಲ್ಲಿ ಸ್ಥಾಪಿತವಾಗಿರುವ ಪಾವಂಜೆ ಪೀಠವು ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಮೂಡಬಿದಿರೆಯ ವೈದ್ಯರು ಹಾಗೂ ಛಾಯಾಗ್ರಾಹಕರು ಆಗಿರುವಂತಹ ಡಾ.ಕೃಷ್ಣ ಮೋಹನ್ ಅವರು, ತಂತ್ರಜ್ಞಾನವು ಮುಂದುವರಿದಂತೆಯೇ ಛಾಯಾಗ್ರಹಣ ಕ್ಷೇತ್ರದಲ್ಲೂ ಬದಲಾವಣೆಗಳಾಗಿವೆ. ಛಾಯಾಗ್ರಹಣವು ಒಂದು ಸೃಜನಾತ್ಮಕ ಕಲೆಯಾಗಿದ್ದು. ನಾವು ತೆಗೆಯುವ ಪ್ರತಿಯೊಂದು ಛಾಯಾಗ್ರಹಣದಲ್ಲಿ ವೈಶಿಷ್ಟ್ಯತೆಯ ಭಾವ ಇರಬೇಕು. ಆಗ‌ ನೈಜ ಕಲೆಯು ಅನಾವರಣಗೊಳ್ಳುತ್ತದೆ ಎಂದ ಅವರು 1830 ದಶಕದಿಂದ ಇಂದಿನವರೆಗೆ ಛಾಯಾಗ್ರಹಣ ಕ್ಷೇತ್ರದಲ್ಲಾದ ಬದಲಾವಣೆಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ಎಚ್.ಸಿ.ಮುರಳೀಧರ ಕೆ. ರಾಯರಮನೆ ಅವರು ಬರೆದ ಸೆಟ್ ಬಿಫೋರ್ ಶೂಟ್ ಕೃತಿಯನ್ನು ಕುಲಪತಿಯವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಅವರು ವರ್ಣ ಚಿತ್ರವನ್ನು ರಚಿಸಿ ಕುಲಪತಿಯವರಿಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಹಾಗೂ ಡಾ.ಕೃಷ್ಣಮೋಹನ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಮುರಳೀಧರ ರಾಯರಮನೆ ಅವರು ಕೃತಿಪರಿಚಯ ಮಾಡಿ ಮಾತನಾಡಿದರು. ಎನ್.ಜಿ.ಪಾವಂಜೆ ಪೀಠದ ಸಂಯೋಜಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಕೊಣಾಜೆ ವಂದಿಸಿದರು. ಕಾಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News