×
Ad

ಕೊರೋನ ನೆಪದಲ್ಲಿ ವರ್ತಕರ ಮೇಲೆ ದಬ್ಬಾಳಿಕೆ: ಕಾಂಗ್ರೆಸ್ ಆರೋಪ

Update: 2020-08-20 17:30 IST

ಮಂಗಳೂರು, ಆ.20: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಸೆಂಟ್ರಲ್ ಮಾರುಕಟ್ಟೆಯಿಂದ ವರ್ತಕರನ್ನು ಕೊರೋನ ನೆಪದಲ್ಲಿ ಹೊರಗಟ್ಟುವ ಪ್ರಯತ್ನದ ಮೂಲಕ ಮನಪಾ ಆಡಳಿತ ಹಾಗೂ ಬಿಜೆಪಿಯ ಸಂಸದರು, ಶಾಸಕರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮನಪಾ ಸದಸ್ಯ ವಿನಯ್‌ರಾಜ್ ಸುದ್ದಿಗೋಷ್ಠಿಯಲ್ಲಿಂದು, ಸೆಂಟ್ರಲ್ ಮಾರುಕಟ್ಟೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ವರ್ತಕರನ್ನು ಹೊರಗಟ್ಟುವ ಪ್ರಯತ್ನ ಖಂಡನೀಯ ಎಂದರು.

ದಮನಿತರ ಧ್ವನಿಯಾಗಿ ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು ಧ್ವನಿಯನ್ನು ದಮನಿಸುವ ಕೆಲಸ ಮಾಡಬಹುದು. ಸೆಂಟ್ರಲ್ ಮಾರುಕಟ್ಟೆಗೆ ಸಂಬಂಧಿಸಿ ಸ್ಥಳೀಯ ಶಾಸಕರು ಹಾಗೂ ಸಂಸದರು ಕಾನೂನನ್ನು ಗಾಳಿಗೆ ತೂರಿ ಜಿಲ್ಲಾಧಿಕಾರಿಯ ಮೂಲಕ ಆದೇಶ ಹೊರಡಿಸಿ 597 ವರ್ತಕರ ಜತೆಗೆ ಅವರನ್ನು ಅವಲಂಬಿಸಿದ ಕುಟುಂಬ ಹಾಗೂ ಸೆಂಟ್ರಲ್ ಮಾರುಕಟ್ಟೆಯನ್ನು ಅವಲಂಬಿಸಿ ಕಾರ್ಯ ನಿರ್ವಹಿಸುತ್ತಿರುವ ದುಡಿಯುವ ವರ್ಗವನ್ನು ದಮನಿಸುತ್ತಿದೆ ಎಂದು ಆರೋಪಿಸಿದರು.

ಹೈಕೋರ್ಟ್‌ನಲ್ಲಿ ಸೆಂಟ್ರಲ್ ಮಾರುಕಟ್ಟೆ ಕುರಿತು ದಾವೆಯನ್ನು ಮನಪಾ ಹಿಂಪಡೆದಿದೆ. ಹೀಗಿರುವಾಗ ಅಲ್ಲಿ ಮತ್ತೆ ವ್ಯಾಪಾರ ವಹಿವಾಟು ನಡೆಸಲು ವರ್ತಕರಿಗೆ ಅವಕಾಶವಿದೆ. ಆದರೆ ಕೊರೋನ ನೆಪದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಜಿಲ್ಲಾಧಿಕಾರಿ ಮೂಲಕ ಅವರನ್ನು ಎಬ್ಬಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಕೋರ್ಟ್‌ನಲ್ಲಿ ಒಂದು ರೀತಿಯಲ್ಲಿ ವರ್ತಿಸಿ ಇದೀಗ ವರ್ತಕರ ಮೇಲೆ ದರ್ಪ ತೋರಿಸುತ್ತಿರುವ ಮೂಲಕ ಮನಪಾ ಆಡಳಿತ ದ್ವಂದ್ವ ನಿಲುವನ್ನು ಅನುಸರಿಸುತ್ತಿದೆ ಎಂದು ವಿನಯರಾಜ್ ಆರೋಪಿಸಿದರು.

ಎಪಿಎಂಸಿಯಲ್ಲಿ 50ಕ್ಕೂ ಅಧಿಕ ಮಂದಿ ಕೊರೋನ ಸೋಂಕಿಗೆ ಒಳಗಾಗಿದ್ದಾರೆ. ಕದ್ರಿ ಮಾರುಕಟ್ಟೆಯ ವ್ಯಾಪಾರಿಗಳಲ್ಲೂ ಕೊರೋನ ಕಾಣಿಸಿಕೊಂಡಿದೆ. ಅಲ್ಲಿ ವ್ಯವಹಾರ ಮುಂದುವರಿದಿರುವಾಗ ಸೆಂಟ್ರಲ್ ಮಾರುಕಟ್ಟೆಗೆ ಕೊರೋನ ಭೀತಿಯನ್ನು ಅನ್ವಯಿಸುತ್ತಿರುವುದು ಏಕೆ? ಅಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಇದ್ದಾಗ ಅಧಿಕಾರಿಗಳು ಅಂತಹ ವರ್ತಕರ ಮೇಲೆ ನಿರ್ದೇಶನ ನೀಡಿ ಕ್ರಮ ವಹಿಸಬೇಕು. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಆಗುವ ಮೊದಲೇ ಸೆಂಟ್ರಲ್ ಮಾರುಕಟ್ಟೆಯನ್ನು ಬಂದ್ ಮಾಡುವುದು ಯಾಕಾಗಿ ಎಂದವರು ಪ್ರಶ್ನಿಸಿದರು.

ನೆಹರೂ ಮೈದಾನದಲ್ಲಿ ಪರ್ಯಾಯ ವ್ಯವಸ್ಥೆಗಾಗಿ 6.5 ಕೋಟಿ ರೂ. ಗಳನ್ನು ಸ್ಮಾರ್ಟ್ ಸಿಟಿಯಡಿ ಪೋಲು ಮಾಡಲು ಮನಪಾ ಮುಂದಾಗಿತ್ತು. ಇದೀಗ ಅದಕ್ಕೂ ಕೋರ್ಟ್‌ನಿಂದ ತಡೆಯಾಜ್ಞೆ ದೊರಕಿದೆ. ಈಗಾಗಲೇ ಸೆಂಟ್ರಲ್ ಮಾರುಕಟ್ಟೆ ಬಂದ್ ಮಾಡಿದ್ದರಿಂದ ವ್ಯಾಪಾರ ಪರವಾನಿಗೆ ನವೀಕರಣ ಆಗದೆ ಮನಪಾಕ್ಕೆ ಆದಾಯ ನಷ್ಟವಾಗಿದೆ. ಈ ನಡುವೆ ಎಪಿಎಂಸಿ ಮುಖ್ಯಪ್ರಾಂಗಣ, ಸೆಂಟ್ರಲ್ ಮಾರುಕಟ್ಟೆ ಸಬ್ ಯಾರ್ಡ್ ಎಂದು ಹೇಳಿಕೊಳ್ಳುತ್ತಿದೆ. ಹಾಗಿದ್ದರೆ ಸೆಂಟ್ರಲ್ ಮಾರುಕಟ್ಟೆ ಮನಪಾ ಅಧೀನಕ್ಕೊಳಪಡುವುದಿಲ್ಲವೇ? ಏನಿದು ದ್ವಂದ್ವ ನಿಲುವು ಎಂಬುದನ್ನು ಮನಪಾ ಆಡಳಿತ ಸ್ಪಷ್ಟಪಡಿಸೇಕು ಎಂದು ಅವರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಝೀನತ್, ಸಂಶುದ್ದೀನ್, ಅನಿಲ್ ಕುಮಾರ್, ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ನಝೀರ್ ಬಜಾಲ್, ಸಂಶುದ್ದೀನ್ ಉಪಸ್ಥಿತರಿದ್ದರು.

ಸುಸಜ್ಜಿತ ಮಾರುಕಟ್ಟೆಯನ್ನು ನಿರ್ಮಾಣ ಮಾಡುವುದಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ. ಆದರೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ, ವರ್ತಕರನ್ನು ಬೀದಿ ಪಾಲು ಮಾಡುವ ಕೆಲಸ ಖಂಡನೀಯ. ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಿ. ಅದರ ಬಗ್ಗೆ ಸಲಹೆ ನೀಡಲು ವಿಪಕ್ಷವಾಗಿ ನಾವು ಸಿದ್ಧರಿದ್ದೇವೆ. ಅದು ಬಿಟ್ಟು ಅಧಿಕಾರವಿದೆಯೆಂದು ವರ್ತಕರ ಮೇಲಿನ ದಬ್ಬಾಳಿಕೆಯನ್ನು ನಾವು ಸಹಿಸುವುದಿಲ್ಲ.
ವಿನಯ್‌ರಾಜ್, ಸದಸ್ಯರು, ಮನಪಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News