×
Ad

ಪುತ್ತೂರು: ರಾಜೀವ್‍ಗಾಂಧಿ, ದೇವರಾಜ್ ಅರಸ್ ಜನ್ಮ ದಿನಾಚರಣೆ

Update: 2020-08-20 17:44 IST

ಪುತ್ತೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಜನ್ಮ ಜಯಂತಿಯನ್ನು ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಕಾಂಗ್ರೆಸ್ 'ಜನಧ್ವನಿ' ಪ್ರತಿಭಟನೆಯಾಗಿ ಪುತ್ತೂರು ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಆಚರಿಸಲಾಯಿತು. 

ಪುತ್ತೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಉಭಯ ನಾಯಕರಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಭೂ ಸುಧಾರಣೆಯಂತಹ ಕ್ರಾಂತಿಕಾರಿ ಬದಲಾವಣೆಯನ್ನು ತಂದಿರುವ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರು ಸಮಾನತೆಯ ಹೆಜ್ಜೆ ಹಾಕಿದ ಮೂಲ ಪುರುಷರಾಗಿದ್ದಾರೆ. 18 ವರ್ಷಕ್ಕೆ ಮತದಾನದ ಹಕ್ಕು ನೀಡಿದವರು ಹಾಗೂ ಅಯೋಧ್ಯೆ ರಾಮ ಮಂದಿರದ ಹೆಬ್ಬಾಗಿಲು ತೆಗೆಸಿದವರು ರಾಜೀವ್ ಗಾಂಧಿ ಎಂಬುದು ಈಗಿನ ಯುವ ಸಮುದಾಯಕ್ಕೆ ತಿಳಿದಿಲ್ಲ. ಮೋದಿ ಹೆಸರಿನಲ್ಲಿ ಪಡೆದ ಓಟುಗಳು ಅನ್ನಭಾಗ್ಯ, ಕ್ಷೀರಭಾಗ್ಯ ಬಡವರಿಗೆ ಭೂಮಿ ನೀಡಿದವರಿಗೆ ಬದಲಾವಣೆಯಾಗುವಂತೆ ಅರಿವು ಮೂಡಿಸಬೇಕಾಗಿದೆ ಎಂದರು. 

ನ್ಯಾಯವಾದಿ ಭಾಸ್ಕರ ಕೋಡಿಂಬಾಳ ಮಾತನಾಡಿ ದೇವರಾಜ್ ಅರಸ್ ಅವರು ನೀಡಿದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಿಜೆಪಿ ಸರ್ಕಾರವು ರೈತರ ಭೂಮಿಯನ್ನು ಮತ್ತೆ ಉಳ್ಳವರ, ಉದ್ಯಮಿಗಳ ಕೈಗೆ ನೀಡಲು ಮುಂದಾಗಿದೆ. ಮುಂದೆ ನಾವೆಲ್ಲರೂ ಅವರ ಕೈಕೆಳಗಿನ ಜೀತದಾಳುಗಳಾಗಿ ಬದುಕುವ ಸ್ಥಿತಿ ನಿರ್ಮಿಸುತ್ತಿದೆ. ಈ ಕಾನೂನು ತಿದ್ದುಪಡಿಗಾಗಿ ನಾವೆಲ್ಲರೂ ಹೋರಾಟ ನಡೆಸಬೇಕಾಗಿದೆ. ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚುವರಿಗೊಳಿಸಿ ಜನರ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿದೆ. ಬಿಜೆಪಿಯಿಂದಾಗಿ ಶ್ರೀಮಂತರು ಹೆಚ್ಚೆಚ್ಚು ಶ್ರೀಮಂತರಾದರೆ ಬಡವರು ಹೆಚ್ಚೆಚ್ಚು ಬಡವರಾಗುತ್ತಿದ್ದಾರೆ ಎಂದು ಹೇಳಿದರು. 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ ಮನುಕುಲವನ್ನೇ ಆತಂಕಕ್ಕೆ ಈಡು ಮಾಡಿದ ಕೋವಿಡ್-19ನಲ್ಲಿಯೂ ಬಿಜೆಪಿ ಸರ್ಕಾರವು  ಭ್ರಷ್ಟಾಚಾರ ನಡೆಸುತ್ತಿದೆ. ಪಿಪಿಇ ಕಿಟ್, ವೆಂಟಿಲೇಟರ್, ಸ್ಯಾನಿಟೈರೈಜರ್, ಕಿಟ್, ಮಾಸ್ಕ್ ಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿ ಜನರ ಹಣವನ್ನು ದೋಚಲಾಗುತ್ತಿದೆ. ದೇವರಾಜ್ ಅರಸ್ ಅವರು ಜಾರಿಗೆ ತಂದ ಭೂ ಸುಧಾರಣೆಯನ್ನು ಬಂಡವಾಳಶಾಹಿಗಳಿಗೆ ಕೊಡುಗೆಯಾಗಿ ನೀಡುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರೈತರನ್ನು ಸುಲಿಗೆ ಮಾಡುತ್ತಿದೆ. ವಿವಾದಿತ ಕೈಗಾರಿಕಾ ನೀತಿ ಜಾರಿಗೊಳಿಸಿ ಕಾರ್ಮಿಕರಿಗೆ ಕೊಡಲಿಯೇಟು ನೀಡುತ್ತಿದೆ ಎಂದು ಹೇಳಿದರು. 

ಸಭೆಯ ಬಳಿಕ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ, ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ತಿದ್ದುಪಡಿ ಕಾಯ್ದೆಯನ್ನು ತಕ್ಷಣವೇ ಹಿಂಪಡೆಯಬೇಕು, ಕೊರೊನಾ ಭ್ರಷ್ಟಾಚಾರದ ಬಗ್ಗೆ ಉಚ್ಚ ನ್ಯಾಯಾಲಯದಿಂದ ತನಿಖೆ ನಡೆಸಬೇಕು ಎಂಬ ಆಗ್ರಹದ ಮನವಿಯನ್ನು ರಾಜ್ಯಪಾಲರಿಗೆ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಸಲ್ಲಿಸಿದರು. 

ಸಭೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಯುವಕ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ ರೈ, ಮುಖಂಡರಾದ ಎ.ಕೆ. ಜಯರಾಮ ರೈ, ಉಲ್ಲಾಸ್, ಕೌಶಲ್ ಪ್ರಸಾದ್, ಜೋಕಿಂ ಡಿಸೋಜ, ಪೂರ್ಣೇಶ್ ಭಂಡಾರಿ, ಸಂತೋಷ್ ಭಂಡಾರಿ, ಇಸಾಕ್ ಸಾಲ್ಮರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News