×
Ad

ಬೆಳೆ ಸಮೀಕ್ಷೆಯಿಂದ ರೈತರಿಗೆ ನಿಖರ ಪರಿಹಾರ ನೀಡಲು ಸಾಧ್ಯ: ಉಡುಪಿ ಅಪರ ಜಿಲ್ಲಾಧಿಕಾರಿ

Update: 2020-08-20 18:29 IST

ಉಡುಪಿ, ಆ.20: ರೈತರು ಬೆಳೆ ಸಮೀಕ್ಷೆಯಲ್ಲಿ ನೇರವಾಗಿ ಪಾಲ್ಗೊಂಡಾಗ ನಿಖರವಾದ ಅಂಕಿ ಅಂಶಗಳು ಸರಕಾರಕ್ಕೆ ಲಭ್ಯವಾಗಲಿದ್ದು, ಇದರಿಂದ ವಿವಿಧ ಯೋಜನೆಗಳಾದ ಬೆಳೆ ವಿಮೆ ಪರಿಹಾರ, ಬೆಳೆ ಹಾನಿ ಪರಿಹಾರ, ಬೆಂಬಲ ಬೆಲೆ ಖರೀದಿ, ಬೆಳೆ ಅಂಕಿ ಅಂಶ ಸಮನ್ವಯ, ಪಹಣಿಯಲ್ಲಿ ಬೆಳೆ ದಾಖಲಾತಿ ಮುಂತಾದ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಸಾಧ್ಯವಾಗಲಿದ್ದು, ಇದರ ಪ್ರಯೋಜನ ರೈತರಿಗೆ ದೊರಕಲಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಮಂಗಳವಾರ ಬೆಳೆ ಸಮೀಕ್ಷೆ ಆ್ಯಪ್ ಕುರಿತು ಜಿಲ್ಲೆಯ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ರೈತರ ಜಮೀನಿನ ಪಹಣಿಯಲ್ಲಿ ಹಿಂದಿನ ಸಾಲುಗಳಲ್ಲಿ ಬೆಳೆ ಸಮೀಕ್ಷೆಯ ಮಾಹಿತಿಯು ಸಮರ್ಪಕವಾಗಿ ದಾಖಲಾಗಿದ್ದರೂ, ಪುನಃ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಇದರಲ್ಲಿ ರೈತ ಸಂಘಟನೆಗಳು ಸರಕಾರ ಹಾಗೂ ಜಿಲ್ಲಾಡಳಿತದ ಜೊತೆ ಕೈಜೋಡಿಸಿ, ರೈತರ ಬೆಳೆ ಸಮೀಕ್ಷೆ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ಬೆಳೆ ಸಮೀಕ್ಷೆ-2020 ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ಆರ್ಥಿಕ ವರ್ಷವನ್ನು ನಮೂದು ಮಾಡಿ ರೈತರ ಹೆಸರು ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಅಧಿಕೃತ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ. ಆ್ಯಪ್‌ಗೆ ಓಟಿಪಿ ದಾಖಲಿಸಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್, ಹಿಸ್ಸಾ, ಮಾಲಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ ತಮ್ಮ ಸರ್ವೇ ನಂಬರ್, ಜಮೀನಿನಲ್ಲಿ ನಿಂತು ವಿವರ ದಾಖಲಿಸಿ ಫೋಟೊ ತೆಗೆದು ಮಾಹಿತಿ ಆಪ್‌ಲೋಡ್ ಮಾಡ ಬಹುದು ಎಂದವರು ನುಡಿದರು.

ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ನ ಡೌನ್‌ಲೋಡ್ ಹಾಗೂ ಬಳಕೆ ಮಾಡುವ ವಿಧಾನದ ಕುರಿತು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಪಾ್ರತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

ಸಭೆಯಲ್ಲಿ ಬೆಳೆ ಸಮೀಕ್ಷೆ ಆ್ಯಪ್‌ನ ಬಳಕೆಯಲ್ಲಿ ಉದ್ಬವಿಸಬಹುದಾದ ಸಂಶಯಗಳ ಕುರಿತು ರೈತ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಪರಿಹರಿಸಲಾಯಿತು. ಜಿಲ್ಲೆಯ ಕೃಷಿಕ ಸಮಾಜ, ರೈತ ಸಂಘ, ಭಾರತೀಯ ಕಿಸಾನ್ ಸಂಘ, ಕೃಷಿಕ ಸಂಘ, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಮೀಕ್ಷೆಯ ಕುರಿತು ಸಂಪೂರ್ಣ ಮಾಹಿತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News