×
Ad

ಮಂಗಳೂರು: ಸೆಂಟ್ರಲ್ ಮಾರುಕಟ್ಟೆ ಮತ್ತೆ ಬಂದ್

Update: 2020-08-20 19:09 IST

ಮಂಗಳೂರು, ಆ.20: ನಗರದ ಸೆಂಟ್ರಲ್ ಮಾರುಕಟ್ಟೆಯನ್ನು ಇಂದು ಮತ್ತೆ ಮಂಗಳೂರು ಮಹಾನಗರ ಪಾಲಿಕೆ ಬಂದ್ ಮಾಡಿ, ವ್ಯವಹಾರವನ್ನು ಸ್ಥಗಿತಗೊಳಿಸಿದೆ.

ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಸೆಂಟ್ರಲ್ ಮಾರುಕಟ್ಟೆಯಲ್ಲಿ ಆಗಸ್ಟ್ 13ರಿಂದ ಕೆಲವು ವ್ಯಾಪಾರಸ್ಥರು ಬಾಗಿಲು ತೆರೆದು ವ್ಯವಹಾರ ಆರಂಭಿಸಿದ್ದರು. ಈ ನಡುವೆ ಮಂಗಳವಾರ ಜಿಲ್ಲಾಧಿಕಾರಿ ಆದೇಶ ನೀಡಿ, ಕೊರೋನ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಬಂದ್ ಮಾಡುವಂತೆ ಸೂಚಿಸಿದ್ದರು. ಈ ನಡುವೆ, ವ್ಯಾಪಾರಸ್ಥರು ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ತಮಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಯಾದಿಯಾಗಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದರು. ಇಂದು ಸಂಜೆ 4 ಗಂಟೆಯ ವೇಳೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವ್ಯವಹಾರ ಸ್ಥಗಿತಗೊಳಿಸುವಂತೆ ಸೂಚಿಸಿ ವ್ಯಾಪಾರಿಗಳನ್ನು ಹೊರಕಳುಹಿಸಿದರು. ಮಾತ್ರವಲ್ಲದೆ ಶುಕ್ರವಾರದಿಂದ ವ್ಯಾಪಾರ ಮಾಡುವಂತಿಲ್ಲ ಎಂಬ ಸೂಚನೆಯನ್ನೂ ನೀಡಿದ್ದು, ಪ್ರಸ್ತುತ ಮತ್ತೆ ಸೆಂಟ್ರಲ್ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.

ಸೆಂಟ್ರಲ್ ಮಾರುಕಟ್ಟೆಗೆ ಬಂದ್ ಮಾಡಿರುವುದಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿ ಪಾಲಿಕೆಯು ತನ್ನ ದೇಶವನ್ನು ಹಿಂಪಡೆದಿದ್ದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ತಮಗೆ ಜಯ ದೊರಕಿದೆ ಎಂದು ಕಳೆದ ಗುರುವಾರದಿಂದ ವ್ಯವಹಾರವನ್ನು ಆರಂಭಿಸಿದ್ದರು. ಈ ನಡುವೆ ಮತ್ತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಆದೇಶ ಹೊರಡಿಸಿದ್ದು, ಕೊರೋನ ಹಿನ್ನೆಲೆಯಲ್ಲಿ ಬಂದ್ ಮಾಡುವಂತೆ ಸೂಚಿಸಿದ್ದರು. ಈ ಕುರಿತು ಬುಧವಾರ ಪಾಲಿಕೆಯ ಅಧಿಕಾರಿಗಳು ಮಾರ್ಕೆಟ್‌ಗೆ ತೆರಳಿ ಜಿಲ್ಲಾಧಿಕಾರಿಗಳ ಆದೇಶದ ನೋಟೀಸನ್ನು ಗೋಡೆಗೆ ಅಂಟಿಸಿದ್ದರು. ಮಾತ್ರವಲ್ಲದೆ,  ಆದೇಶದ ಬಗ್ಗೆ ವ್ಯಾಪಾರಿಗಳಿಗೆ ವೈಯಕ್ತಿಕವಾಗಿ ನೋಟೀಸು ನೀಡಿ ಗುರುವಾರದಿಂದ ವ್ಯಾಪಾರ ಮಾಡದಂತೆ ಸೂಚಿಸಿದ್ದರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಗುರುವಾರ ಸಂಜೆಯವರೆಗೆ ವ್ಯಾಪಾರ ಮಾಡಲು ಪಾಲಿಕೆ ಅವಕಾಶ ಕಲ್ಪಿಸಿತ್ತು. ಸಂಜೆ 4 ಗಂಟೆ ವೇಳೆಗೆ ಅಧಿಕಾರಿಗಳು ಆಗಮಿಸಿ ಮಾರ್ಕೆಟ್ ಒಳಗಿದ್ದ ವ್ಯಾಪಾರಿಗಳನ್ನು ಹೊರಗೆ ಕಳುಹಿಸಿದರು.
ಇದೇ ವೇಳೆ ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಅಹ್ಮದ್ ಬಾವಾ ನೇತೃತ್ವದ ನಿಯೋಗ ಗುರುವಾರ ಮಧ್ಯಾಹ್ನ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.

‘‘ಬುಧವಾರ ನಮ್ಮ ತಂಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದಾಗ ಗುರುವಾರ ಸಂಜೆಯವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡುವುದಾಗಿ ಬಳಿಕ ಖಾಲಿ ಮಾಡುವಂತೆ ಸೂಚಿಸಿದ್ದರು. ನಾವು ಒಂದು ವಾರ ಕಾಲಾವಕಾಶ ಕೇಳಿದ್ದೆವು. ಇಂದು ಮಧ್ಯಾಹ್ನ ಮತ್ತೆ ವರ್ತಕರ ತೀರ್ಮಾನವನ್ನು ತಿಳಿಸುವಂತೆ ಹೇಳಿದ್ದ ಕಾರಣ ಮತ್ತೆ ಇಂದು ಅವರನ್ನು ಭೇಟಿಯಾಗಿ ಕಾಲಾವಕಾಶ ಕೋರುವಂತೆ ಕೋರಿದೆವು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆ ದೃಷ್ಟಿಯಿಂದ ಆದೇಶವನ್ನು ಹಿಂಪಡೆಯಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬದಲಿ ವ್ಯವಸ್ಥೆಗೆ ಮೂರು ಜಾಗವನ್ನು ನಾವು ಸೂಚಿಸಿದ್ದೆವು. ಹಳೆ ಬಸ್ಸು ನಿಲ್ದಾಣ, ಈಗಾಗಲೇ ಪುರಭವನ ಹಾಗೂ ಲೇಡಿಗೋಶನ್ ಎದುರು ಚಿಲ್ಲರೆ ವ್ಯಾಪಾರಸ್ಥರಿಗಾಗಿ ನಿರ್ಮಿಸಲಾದ ಶೆಡ್‌ಗಳಲ್ಲಿ (ಎರಡು ಶೆಡ್‌ಗಳನ್ನು ಒಂದು ಶೆಡ್ ಆಗಿ ಪರಿವರ್ತಿಸುವಂತೆ), ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿ ಕಟ್ಟಡದಲ್ಲಿ ವ್ಯವಸ್ಥೆಗೆ ತಿಳಿಸಿದ್ದೆವು. ಈ ಕುರಿತು ಮನಪಾ ಪ್ರಭಾರ ಆಯುಕ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಚಿಲ್ಲರೆ ವ್ಯಾಪಾರಸ್ಥರಿಗಾಗಿ ನಿರ್ಮಿಸಲಾದ ಶೆಡ್‌ಗಳಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ ಎಂದು ಅಹ್ಮದ್ ಬಾವಾ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ನಮ್ಮ ಬದುಕನ್ನೇ ಕಸಿದುಕೊಳ್ಳಲಾಗುತ್ತಿದೆ: ವ್ಯಾಪಾರಸ್ಥರ ಅಳಲು
ಈ ನಡುವೆ ಇಂದು ಕೂಡಾ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದು, ಈ ರೀತಿಯಾಗಿ ನಮ್ಮನ್ನು ಅತಂತ್ರರನ್ನಾಗಿಸುವ ಮೂಲಕ ಆಡಳಿತ ವ್ಯವಸ್ಥೆ ನಮ್ಮ ಬದುಕಿನ ಹಕ್ಕನ್ನೇ ಕಸಿಯುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೊರೋನ ಎಲ್ಲಾ ಕಡೆ ವ್ಯಾಪಕವಾಗುತ್ತಿರುವಾಗ, ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವಾಗ ಸೆಂಟ್ರಲ್ ಮಾರ್ಕೆಟನ್ನು ಕೊರೋನ ನೆಪದಲ್ಲಿ ಬಂದ್ ಮಾಡಿ ನಮ್ಮ ಮೇಲೆ ಯಾಕೆ ಈ ರೀತಿ ಅನ್ಯಾಯ ಎಸಗಲಾಗುತ್ತಿದೆ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News