×
Ad

ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಪ್ರಕರಣ: ಆರೋಪಿ ವಸಂತ ವಿರುದ್ಧ ಯುಎಪಿಎ

Update: 2020-08-20 20:14 IST

ಮಂಗಳೂರು, ಆ.20: ಇಲ್ಲಿನ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯ ಕಾರ್ಕಳ ಮುದ್ರಾಡಿಯ ನಿವಾಸಿ ವಸಂತ ಕೃಷ್ಣ ಶೇರಿಗಾರ್(33) ಎಂಬಾತನನ್ನು ಬಂಧಿಸಿ, ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 505 ಬಿ (ಸಾರ್ವಜನಿಕರಲ್ಲಿ ಭೀತಿ ಮೂಡಿಸುವಿಕೆ), 507 (ಅನಾಮಧೇಯ ಸಂವಹನದಿಂದ ಬೆದರಿಕೆ), ಯುಎಪಿಎ (ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ) 3(1)ಡಿ (ನಾಗರಿಕ ವಿಮಾನಯಾನಕ್ಕೆ ಬೆದರಿಕೆ)ಯಂತೆ ಪ್ರಕರಣ ದಾಖಲಿಸಲಾಗಿದೆ.

ಕೊರೋನ ಸೋಂಕು ಪರೀಕ್ಷೆಗಾಗಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಸೋಂಕು ಪರೀಕ್ಷೆ ಬಳಿಕ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಿಗೆ ಆ.19ರ ಮಧ್ಯಾಹ್ನ ಈ ಕರೆ ಬಂದಿತ್ತು. ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ಸಿಐಎಸ್‌ಎಫ್ ಹಾಗೂ ಬಜ್ಪೆ ಪೊಲೀಸರು ನಿಲ್ದಾಣ ತಪಾಸಣೆ ನಡೆಸಿದ್ದರು. ಬಳಿಕ ಇದೊಂದು ಹುಸಿಬಾಂಬ್ ಕರೆ ಎನ್ನುವುದು ದೃಢಪಟ್ಟಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಉಡುಪಿಯಿಂದ ಆರೋಪಿಯನ್ನು ಸಂಜೆ ವಶಕ್ಕೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News