×
Ad

ಕಾರ್ಕಳ: ಪಪೂ ಶಿಕ್ಷಣ ಮಂಡಳಿ ಬೇಜವಾಬ್ದಾರಿಯಿಂದ ವಿದ್ಯಾರ್ಥಿನಿಗೆ ಅನ್ಯಾಯ ಆರೋಪ

Update: 2020-08-20 22:21 IST

ಕಾರ್ಕಳ, ಆ.20: ನಗರದ ಕುಕ್ಕುಂದೂರು ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಉತ್ತಮ ಅಂಕಗಳಿಸಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದರೂ, ಪಿಯು ಶಿಕ್ಷಣ ಮಂಡಳಿಯ ಬೇಜವಾಬ್ದಾರಿಯಿಂದ ಕಡಿಮೆ ಅಂಕ ಸಿಗುವ ಮೂಲಕ ಅನ್ಯಾಯಕ್ಕೆ ಒಳಗಾಗಿದ್ದಾಳೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ಝುಹಾ ಫಿರ್ದೌಸ್ ಐದು ವಿಷಯಗಳಲ್ಲಿ ಉತ್ತಮ ಅಂಕವನ್ನು ಗಳಿಸಿದ್ದರೂ ಅರ್ಥಶಾಸ್ತ್ರ ವಿಷಯದಲ್ಲಿ ಕಡಿಮೆ ಅಂಕ ಪಡೆದಿರುವುದಾಗಿ ಪ್ರಕಟವಾಗಿತ್ತು. ಅರ್ಥಶಾಸ್ತ್ರ ವಿಭಾಗದಲ್ಲಿ ಉತ್ತಮ ಅಂಕ ಗಳಿಸುವ ವಿಶ್ವಾಸ ಹೊಂದಿದ್ದ ವಿದ್ಯಾರ್ಥಿನಿ ಈ ಫಲಿತಾಂಶ ನೋಡಿ ಆಘಾತಗೊಂಡಿದ್ದಳು. ಈ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಯ ಪ್ರತಿಯನ್ನು ಆನ್ ಲೈನ್‌ನಲ್ಲಿ ತರಿಸಿಕೊಂಡಾಗ ಅಂಕ ಪಟ್ಟಿಯಲ್ಲಿ ವ್ಯತ್ಯಾಸಗಳಾಗಿರುವುದು ತಿಳಿದು ಬಂದಿದೆ ಎಂದು ವಿದ್ಯಾರ್ಥಿನಿಯ ಪೋಷಕರು ತಿಳಿಸಿದ್ದಾರೆ.

ಝುಹಾ ಫಿರ್ದೌಸ್ ಬರೆದ ಅರ್ಥಶಾಸ್ತ್ರ ವಿಷಯದ ಉತ್ತರ ಪತ್ರಿಕೆಯಲ್ಲಿ ಆಕೆಗೆ 82 ಅಂಕ ಲಭಿಸಿತ್ತು. ಆದರೆ ಪರೀಕ್ಷಾ ಮಂಡಳಿಯ ಪ್ರಕಟಿತ ಅಂಕ ಕಾಲಂನಲ್ಲಿ 82ರ ಬದಲಿಗೆ 49 ಎಂದು ತಪ್ಪಾಗಿ ನಮೂದಾಗಿದೆ. ಅಂಕಗಳನ್ನು ನಮೂದಿಸುವಲ್ಲಿ ಇಲಾಖೆ ತಪ್ಪೆಸಗಿತ್ತು. ಇಷ್ಟಲ್ಲದೆ ಹೆಚ್ಚು ಅಂಕ ಸಿಗದಿರುವ ಕುರಿತು ಸಂಶಯಗೊಂಡ ವಿದ್ಯಾರ್ಥಿನಿ ಉತ್ತರ ಪತ್ರಿಕೆಯ ಪ್ರತಿಯನ್ನು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಮಾಧವ ಭಟ್‌ರಲ್ಲಿ ಪರಿಶೀಲನೆಗೆ ನೀಡಿದ್ದಳು. ಪರಿಶೀಲಿಸಿದ ಉಪನ್ಯಾಸಕರು ಈಕೆಗೆ ಇನ್ನೂ 8 ಅಂಕ ಹೆಚ್ಚು ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿನಿಯ ನಿರೀಕ್ಷೆ ಇದಾಗಿತ್ತು. ಇಲ್ಲೂ ಈಕೆಗೆ ವಂಚನೆಯಾಗಿದೆ. ಆಕೆಯ ಅಂಕ ಪಟ್ಟಿಯಲ್ಲಿ ವ್ಯತ್ಯಾಸವಾಗದೆ ಇರುತ್ತಿದ್ದರೆ ಆಕೆ ಕಾಲೇಜಿನ ಫಲಿತಾಂಶ ಪಟ್ಟಿಯಲ್ಲಿ ಮೊದಲ ಸಾಲಿನ ನಾಲ್ಕನೇ ಸ್ಥಾನ ಮತ್ತು ರ್ಯಾಂಕ್ ಸಾಲಿನಲ್ಲಿ 10ನೇ ಶ್ರೇಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಳು ಎಂದು ಪೋಷಕರು ದೂರಿದ್ದಾರೆ.

ಬೋರ್ಡ್ ಪ್ರಕಟಿಸಿದ ಫಲಿತಾಂಶದಲ್ಲಿ ವ್ಯತ್ಯಾಸಗಳು ಆಗಿವೆ. ಮರುಮೌಲ್ಯಮಾಪನ ಮೊರೆ ಹೋಗಲು ವಿದ್ಯಾರ್ಥಿನಿಗೆ ಸಲಹೆ ನೀಡಿದ್ದೇವೆ.
-ರಾಮಚಂದ್ರ ನೆಲ್ಲಿಕಾರು, ಪ್ರಾಂಶುಪಾಲರು-ಕೆಎಂಇಎಸ್ ಕಾಲೇಜು ಕುಕ್ಕುಂದೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News