ರಶ್ಯ ಪ್ರತಿಪಕ್ಷ ನಾಯಕನ ಸ್ಥಿತಿ ಗಂಭೀರ

Update: 2020-08-20 17:34 GMT
ಫೋಟೊ: twitter.com/KooyJan

ಮಾಸ್ಕೋ (ರಶ್ಯ), ಆ. 20: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ತೀವ್ರ ಅಸ್ವಸ್ಥರಾಗಿದ್ದು, ಗುರುವಾರ ಸೈಬೀರಿಯದ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ವಿಷಪ್ರಾಶನವಾಗಿರುವ ಶಂಕೆಯಿದೆ ಎಂದು ಅವರ ವಕ್ತಾರೆ ಹೇಳಿದ್ದಾರೆ.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರರಾಗಿರುವ ವಕೀಲ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, 44 ವರ್ಷದ ನವಾಲ್ನಿ ಓಮ್‌ಸ್ಕ್ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಮಾಸ್ಕೋಗೆ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಜ್ಞೆ ಕಳೆದುಕೊಂಡರು ಹಾಗೂ ಅವರ ವಿಮಾನವು ತುರ್ತು ಭೂಸ್ಪರ್ಶ ನಡೆಸಿತು.

ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನವಾಲ್ನಿಯನ್ನು ಕೃತಕ ಶ್ವಾಸದಲ್ಲಿ ಇಡಲಾಗಿದೆ ಹಾಗೂ ಅವರ ಅಸೌಖ್ಯಕ್ಕೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅವರ ವಕ್ತಾರೆ ಕಿರಾ ಯಾರ್ಮಿಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

‘‘ಅಲೆಕ್ಸಿ ಅವರಿಗೆ ವಿಷಪ್ರಾಶನವಾಗಿದೆ. ಅವರಿಗೆ ಉದ್ದೇಶಪೂರ್ವಕ ವಿಷಪ್ರಾಶನವಾಗಿರುವುದು ಸ್ಪಷ್ಟ. ಅವರೀಗ ತುರ್ತು ನಿಗಾ ಘಟಕದಲ್ಲಿ ಇದ್ದಾರೆ’’ ಎಂದು ಅವರು ‘ಇಕೋ ಆಫ್ ಮಾಸ್ಕೋ’ ರೇಡಿಯೊದೊಂದಿಗೆ ಮಾತನಾಡುತ್ತಾ ಹೇಳಿದರು.

ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯ ಅಲೆಕ್ಸಾಂಡರ್ ಮುರಖೊವ್‌ಸ್ಕಿ ಸರಕಾರಿ ಸುದ್ದಿ ಸಂಸ್ಥೆ ‘ಟಾಸ್’ಗೆ ತಿಳಿಸಿದರು.

 ‘‘ಅಲೆಕ್ಸೀಗೆ ಚಹಾದಲ್ಲಿ ಯಾವುದೋ ವಿಷವನ್ನು ಬೆರೆಸಿ ಕೊಡಲಾಗಿದೆ ಎಂದು ನಾವು ಭಾವಿಸಿದ್ದೇವೆ. ಅದೊಂದೇ ಅವರು ಬೆಳಗ್ಗೆ ಸೇವಿಸಿದ ಏಕೈಕ ಆಹಾರವಾಗಿದೆ’’ ಎಂದು ಅವರ ವಕ್ತಾರೆ ಯಾರ್ಮಿಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಹಿಂದೆ ಹಲವು ಬಾರಿ ನವಾಲ್ನಿ ಮೇಲೆ ದೈಹಿಕ ಹಲ್ಲೆಗಳನ್ನು ನಡೆಸಲಾಗಿತ್ತು ಹಾಗೂ ರಶ್ಯ ಸರಕಾರದ ಟೀಕಾಕಾರರಿಗೆ ವಿಷಪ್ರಾಶನಗೈಯ್ಯಲಾಗಿತ್ತು.

2017ರಲ್ಲಿ ಅವರ ಕಚೇರಿಯಲ್ಲೇ ಅವರ ಕಣ್ಣಿಗೆ ದುಷ್ಕರ್ಮಿಗಳು ರಾಸಾಯನಿಕವೊಂದನ್ನು ಎರಚಿಸಿದ್ದರು. ಅದರಿಂದ ಅವರು ಗುಣ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News