ಸರಕಾರಿ ದಾಖಲೆಗಳ ಪ್ರಕಾರ ಈ ಮಹಿಳೆಗೆ 18 ತಿಂಗಳುಗಳಲ್ಲಿ 8 ಮಕ್ಕಳು!

Update: 2020-08-21 14:49 GMT
ಸಾಂದರ್ಭಿಕ ಚಿತ್ರ

ಮುಝಫ್ಫರ್‌ಪುರ,ಆ.21: ಬಿಹಾರದಲ್ಲಿ 65 ಹರೆಯದ ಮಹಿಳೆಯೋರ್ವಳು ಕೇವಲ 18 ತಿಂಗಳುಗಳ ಅವಧಿಯಲ್ಲಿ ಬರೋಬ್ಬರಿ ಎಂಟು ಮಕ್ಕಳಿಗೆ ಜನ್ಮ ನೀಡಿದ್ದಾಳೆ,ಆದರೆ ಇದು ಸರಕಾರಿ ದಾಖಲೆಗಳಲ್ಲಿ!

 ಮುಝಫ್ಫರ್‌ಪುರ ಜಿಲ್ಲೆಯ ಮುಸಾಹರಿ ಬ್ಲಾಕ್‌ನ ಛೋಟಿ ಕೋಥಿಯಾ ಗ್ರಾಮದ ನಿವಾಸಿ ಲೀಲಾದೇವಿ 21 ವರ್ಷಗಳ ಹಿಂದೆ ತನ್ನ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಳು. ಆಕೆಗೆ ಹೆರಿಗೆಯಾಗಿದ್ದು ಅದೇ ಕೊನೆ. ಆದರೆ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಹೆರಿಗೆ ಸೌಲಭ್ಯ ಕಾರ್ಯಕ್ರಮ (ಎನ್‌ಎಂಬಿಎಸ್)ದ ಹಲವಾರು ಫಲಾನುಭವಿಗಳಲ್ಲಿ ಲೀಲಾದೇವಿ ಕೂಡ ಒಬ್ಬಳಾಗಿದ್ದಾಳೆ.

ಎನ್‌ಎಂಬಿಎಸ್ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಡಿ ತಾಯಿಗೆ 1,400 ರೂ.ಗಳನ್ನು ಮತ್ತು ಆಕೆಗೆ ನೆರವಾಗಲು ಆಶಾ ಕಾರ್ಯಕರ್ತೆಗೆ 600 ರೂ.ಗಳನ್ನು ನೀಡಲಾಗುತ್ತದೆ. ತಾನೂ ಈ ಕಾರ್ಯಕ್ರಮದ ಫಲಾನುಭವಿಯಾಗಿದ್ದು ಗೊತ್ತಾದಾಗ ಲೀಲಾದೇವಿಯ ಜೊತೆ ಸಣ್ಣ ರೈತನಾಗಿರುವ ಆಕೆಯ ಪತಿಗೆ ಕೂಡ ಅಚ್ಚರಿಯುಂಟಾಗಿತ್ತು. ಸರಕಾರಿ ದಾಖಲೆಗಳಲ್ಲಿ ಲೀಲಾದೇವಿ 18 ತಿಂಗಳುಗಳಲ್ಲಿ ಎಂಟು ಮಕ್ಕಳಿಗೆ ಜನ್ಮ ನೀಡಿದ್ದಳು.

 ‘ನನ್ನ ನಾಲ್ಕನೆಯ ಹಾಗೂ ಕೊನೆಯ ಸಂತಾನ ಹುಟ್ಟಿದ್ದು 21 ವರ್ಷಗಳ ಹಿಂದೆ. ಫಲಾನುಭವಿಯಾಗಿ ನನ್ನ ಹೆಸರನ್ನು ಸೇರಿಸಲಾಗಿದೆ ಮತ್ತು ನನಗೆ ಹಣವನ್ನು ನೀಡಲಾಗಿದೆ ಎಂಬ ಮಾಹಿತಿ ವಾರದ ಹಿಂದೆ ಸಿಕ್ಕಿತ್ತು. ನನ್ನ ಖಾತೆಯಿರುವ ಗ್ರಾಹಕ ಸೇವಾ ಕೇಂದ್ರ(ಸಿಎಸ್‌ಪಿ)ದ ನಿರ್ವಾಹಕನನ್ನು ಸಂಪರ್ಕಿಸಿ ವಿಚಾರಿಸಿದಾಗ,ಈ ಬಗ್ಗೆ ಪೊಲೀಸ್ ದೂರು ನೀಡದಂತೆ ಆತ ಕೋರಿದ್ದ ಮತ್ತು ನನ್ನ ಹೆಸರಿನಲ್ಲಿ ಪಡೆಯಲಾಗಿದ್ದ ಹಣವನ್ನು ಮರಳಿಸಲಾಗುವುದು ಎಂದು ತಿಳಿಸಿದ್ದ ’ ಎಂದು ಲೀಲಾದೇವಿ ಹೇಳಿದ್ದಾಳೆ.

ಕಾರ್ಯಕ್ರಮದಡಿ ‘ಲಾಭ ’ ಪಡೆದಿರುವವರಲ್ಲಿ ಲೀಲಾದೇವಿ ಏಕೈಕ ಹಿರಿಯ ವಯಸ್ಸಿನ ಮಹಿಳೆಯಲ್ಲ. ಜಿಲ್ಲೆಯಲ್ಲಿ ಇಂತಹ 50ಕ್ಕೂ ಹೆಚ್ಚಿನ ಮಹಿಳೆಯರ ಹೆಸರುಗಳಲ್ಲಿ ಈ ವಂಚನೆಯನ್ನು ನಡೆಸಲಾಗಿದೆ.

ಶಾಂತಿದೇವಿ (66) ಒಂದೇ ದಿನ,ಹತ್ತು ಗಂಟೆಗಳ ಅವಧಿಯಲ್ಲಿ ಅವಳಿ ಮಕ್ಕಳಲ್ಲದಿದ್ದರೂ ಎರಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಬೀನಾ ಖಾತೂನ್(59) ಎಂಬಾಕೆಯನ್ನೂ ಯೋಜನೆಯ ಫಲಾನುಭವಿ ಎಂದು ತೋರಿಸಲಾಗಿದೆ.

ಈ ಹಗರಣ ಬೆಳಕಿಗೆ ಬಂದ ನಂತರ ಜಿಲ್ಲಾಧಿಕಾರಿಗಳು ಗುರುವಾರ ತನಿಖೆಗೆ ಆದೇಶಿಸಿದ್ದಾರೆ.

ವಹಿವಾಟು ವ್ಯವಸ್ಥೆಯನ್ನು ಬೆರಳ ಮುದ್ರೆಗಳು ಮತ್ತು ಆಧಾರ್‌ನೊಂದಿಗೆ ಜೋಡಿಸಲಾಗಿದೆ. ಹೀಗಿದ್ದರೂ ನಿರ್ವಾಹಕ ಇದನ್ನೆಲ್ಲ ಹೇಗೆ ಮಾಡಿದ ಎನ್ನುವುದು ತನಗೆ ತಿಳಿದಿಲ್ಲ ಎಂದು ಸಿಎಸ್‌ಪಿ ಜೋಡಣೆಗೊಂಡಿರುವ ಮುಸಾಹರಿಯ ಎಸ್‌ಬಿಐ ಶಾಖಾ ಪ್ರಬಂಧಕರು ಹೇಳಿದ್ದಾರೆ.

ವಂಚನೆಯು ಬೆಳಕಿಗೆ ಬಂದ ನಂತರ ಸಿಎಸ್‌ಪಿ ನಿರ್ವಾಹಕ ಸುಶೀಲ ಕುಮಾರ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News