ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ: ಕಚೇರಿ ಸಿಬ್ಬಂದಿಯ ವಿಚಾರಣೆ ನಡೆಸಿದ ಸಿಬಿಐ

Update: 2020-08-21 15:40 GMT

ಮುಂಬೈ/ಹೊಸದಿಲ್ಲಿ, ಆ. 16: ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಆದೇಶದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ, ನಟ ಸುಶಾಂತ್ ಸಿಂಗ್ ಅವರ ಕಚೇರಿಯ ಸಿಬ್ಬಂದಿಯನ್ನು ಮುಂಬೈಯಲ್ಲಿ ಶುಕ್ರವಾರ ವಿಚಾರಣೆ ನಡೆಸಿದೆ.

ನೂಪುರ್ ಪ್ರಸಾದ್ ನೇತೃತ್ವದ ಸಿಬಿಐಯ ವಿಶೇಷ ತನಿಖಾ ತಂಡ ನಿನ್ನೆ ತಡ ರಾತ್ರಿ ಮುಂಬೈಗೆ ಆಗಮಿಸಿ ವಿಚಾರಣೆ ಆರಂಭಿಸಿತು. 10 ಸದಸ್ಯರಿರುವ ತಂಡದಲ್ಲಿ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯ (ಸಿಎಫ್‌ಎಸ್‌ಎಲ್)ದ ತಜ್ಞರು ಕೂಡ ಇದ್ದಾರೆ. ವಿಧಿ ವಿಜ್ಞಾನ ತಜ್ಞರು ಕೂಡ ಸುಶಾಂತ್ ಸಿಂಗ್ ರಜಪೂತ್ ಅವರ ಮನೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಅಧಿಕಾರಿಗಳು ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪರಿಶೀಲನೆ ನಡೆಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಅಡುಗೆ ಕೆಲಸದ ಆಳು ಪ್ರಮುಖ ಸಾಕ್ಷಿಯಾಗಿದ್ದು, ಅವರ ವಿಚಾರಣೆ ನಡೆಸಲಾಗಿದೆ.

ಸಿಬಿಐ ಅಧಿಕಾರಿಗಳ ಒಂದು ತಂಡ ಸಂತಾಕ್ರೂಜ್‌ನಲ್ಲಿರುವ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ)ಕಚೇರಿಯಲ್ಲಿ ಹಾಗೂ ವಾಯು ಪಡೆಯ ಅತಿಥಿ ಗೃಹದಲ್ಲಿ ನಟನ ಕಚೇರಿಯ ಸಿಬ್ಬಂದಿಯ ವಿಚಾರಣೆ ನಡೆಸಿದೆ. ಸಿಬಿಐ ಅಧಿಕಾರಿಗಳ ಇನ್ನೊಂದು ತಂಡ ಬಾಂದ್ರಾ ಪೊಲೀಸ್ ಠಾಣೆಯ ಸಮೀಪ ಇರುವ ಪೊಲೀಸ್ ಉಪ ಆಯುಕ್ತರ ಕಚೇರಿಗೆ ಭೇಟಿ ನೀಡಿತು. ರಿಯಾ ಚಕ್ರವರ್ತಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬದ ಸದಸ್ಯರು ಸೇರಿದಂತೆ ಪ್ರಕರಣದ ಆರೋಪಿಗಳ ವಿಚಾರಣೆಯನ್ನು ಸಿಬಿಐ ಮುಂದಿನ ವಾರ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News