ಇದು ಗಾಂಧೀಜಿಯವರ ಭಾರತವಲ್ಲ: ಸಂದರ್ಶನದಲ್ಲಿ ಫಾರೂಕ್ ಅಬ್ದುಲ್ಲಾ

Update: 2020-08-21 15:46 GMT

 ಹೊಸದಿಲ್ಲಿ, ಆ.22: ಕಳೆದ ವರ್ಷದ ಆಗಸ್ಟ್‌ನಲ್ಲಿ ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಕೆಲವೇ ದಿನಗಳ ಮುನ್ನ ತಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನಾದರೂ, ಆ ಸಂದರ್ಭದಲ್ಲಿ ಅವರು ಕೇಂದ್ರ ಸರಕಾರದ ನಡೆಯ ಬಗ್ಗೆ ಯಾವುದೇ ಸುಳಿವನ್ನು ನೀಡಿರಲಿಲ್ಲವೆಂದು ನ್ಯಾಶನಲ್ ಕಾನ್ಫರೆನ್ಸ್ ನಾಯಕ, ಮಾಜಿ ಕೇಂದ್ರ ಸಚಿವ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಬಂಧನದಿಂದ ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ NDTVಗೆ ಸಂದರ್ಶನ ನೀಡಿದ ಅವರು, ‘‘ ಯಾರಿಗೂ ಇನ್ನು ಮುಂದೆ ಭಾರತ ಸರಕಾರದ ಮೇಲೆ ನಂಬಿಕೆಯಿಡಲು ಸಾಧ್ಯವಿಲ್ಲ. ಅವರು ಸುಳ್ಳು ಹೇಳದ ಒಂದೇ ದಿನವೂ ಇರಲಾರದು. ಈಗ ಇದು ಗಾಂಧೀಜಿಯವರ ಭಾರತವಲ್ಲ ’’ಎಂದು ಹೇಳಿದ್ದಾರೆ.

‘‘ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮುನ್ನ ಭಾರೀ ಸಂಖ್ಯೆಯಲ್ಲಿ ಸೇನಾಪಡೆಗಳು ಅಲ್ಲಿ ನಿಯೋಜನೆಗೊಳ್ಳುವುದಕ್ಕೆ ಒಂದು ದಿನ ಮೊದಲು ತಾನು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದೆ. ಆದರೆ ಪ್ರಧಾನಿ ನನಗೆ ಯಾವುದೇ ಸುಳಿವನ್ನು ನೀಡಲಿಲ್ಲ. ಭಾರೀ ಸಂಖ್ಯೆಯ ಸೈನಿಕರನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ಪ್ರವಾಸಿಗರನ್ನು ಹೊರಕಳುಹಿಸಲಾಗುತ್ತಿದೆ, ಅಮರನಾಥ ಯಾತ್ರೆಯನ್ನು ರದ್ದುಪಡಿಸಲಾಗಿದೆ. ಇವೆಲ್ಲದರ ಅಗತ್ಯವಿತ್ತೇ. ಪಾಕಿಸ್ತಾನದ ಜೊತೆ ಯುದ್ಧ ಅಥವಾ ಇನ್ನೇನೂ ನಡೆಯಲಿರುವ ಹಾಗೆ ಭಾಸವಾಗುತ್ತಿದೆ ’’ಎಂದು ತಾನು ಅವರಿಗೆ ತಿಳಿಸಿದ್ದಾಗಿ ಫಾರೂಕ್ ಸಂದರ್ಶನದಲ್ಲಿ ಹೇಳಿದ್ದಾರೆ.

  “ಆದರೆ ಪ್ರಧಾನಿ ಈ ಬಗ್ಗೆ ಏನೂ ಹೇಳಲಿಲ್ಲ. ಆದರೆ ಅವರು ನನ್ನ ಚಿಂತನೆಗೆ ಬಾರದ ಇತರ ವಿಷಯಗಳ ಬಗ್ಗೆ ಮಾತನಾಡಿದರು” ಎಂದರು. ಈಗ ತಾವು ಪ್ರಧಾನಿಯವರಿಗೆ ಏನನ್ನು ಹೇಳಲು ಬಯಸುವಿರಿ ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿದ ಅವರು, ‘‘ ಪ್ರಧಾನಿಯವರು ಇನ್ನೂ ಹೆಚ್ಚು ಪ್ರಾಮಾಣಿಕರಾಗಬೇಕು ಹಾಗೂ ವಾಸ್ತವಾಂಶಗಳನ್ನು ಎದುರಿಸಬೇಕು. ತಾನು ಮಾಡಿರುವುದು ಸರಿಯಲ್ಲವೆಂದು ಅವರಿಗೆ ಗೊತ್ತಿದೆ’’ ಎಂದರು.

  ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬೆನ್ನಲ್ಲೇ ಕೇಂದ್ರ ಸರಕಾರವು 83 ವರ್ಷ ವಯಸ್ಸಿನ ಫಾರೂಕ್ ಅಬ್ದುಲ್ಲಾ, ಅವರ ಪುತ್ರಿ ಉಮರ್ ಅಬ್ದುಲ್ಲಾ ಹಾಗೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ಕಾಶ್ಮೀರಿ ನಾಯಕರನ್ನು ಸಾರ್ವಜನಿಕ ಸುರಕ್ಷಿತ ಕಾಯ್ದೆಯಡಿ ಗೃಹಬಂಧನದಲ್ಲಿರಿಸಿತ್ತು. ಸುಮಾರು ಏಳು ತಿಂಗಳುಗಳ ಬಂಧನದ ಬಳಿಕ ಫಾರೂಕ್ ಅವರನ್ನು ಬಿಡುಗಡೆಗೊಳಿಸಿತ್ತು.

 ‘‘ ನಾವು ಯಾವತ್ತೂ ದೇಶದ ಪರವಾಗಿಯೇ ನಿಂತಿದ್ದೇವೆ. ಆದರೂ, ನಮಗೆ ಹೀಗಾಗುವುದೆಂದು ನಾವು ಯಾವತ್ತೂ ಯೋಚಿಸಿರಲಿಲ್ಲ. ಪ್ರತ್ಯೇಕವಾದಿಗಳಿಗಿಂತ ಭಿನ್ನವಾಗಿ ನಮ್ಮನ್ನು ಸರಕಾರವು ಕಾಣಲಿಲ್ಲವೆಂದು” ಅವರು ವಿಷಾದಿಸಿದರು.

ತನ್ನ ಬಂಧನದ ಬಗ್ಗೆ ಸಾರ್ವಜನಿಕರಲ್ಲಿ ಅನುಕಂಪದ ಕೊರತೆಯಿತ್ತು ಎಂಬ ಅನಿಸಿಕೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ, ‘‘ ಇಲ್ಲಿನ ಹಲವಾರು ಮಂದಿ ಭಾರತದ ಮೇಲೆ ವಿಶ್ವಾಸವಿರಿಸಿದ್ದಕ್ಕಾಗಿ ನಿಮಗೆ ದೊರೆತ ಪ್ರತಿಫಲ ಇದಾಗಿದೆ ಎಂಬುದಾಗಿ ಭಾವಿಸಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News