×
Ad

ಅಪಘಾತದ ಗಾಯಾಳು ಸೈನಿಕರ ರಕ್ಷಣೆಗೆ ಧಾವಿಸಿದ ಕಾಶ್ಮೀರಿಗಳು: ವೈರಲ್ ಆದ ‘ಕಾಶ್ಮೀರಿ ಇನ್ಸಾನಿಯತ್’

Update: 2020-08-21 21:26 IST

ಶ್ರೀನಗರ,ಆ.20: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇತ್‌ಪೊರಾದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಸ್ಥಳೀಯರು ನೆರವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಛಾಯಾಚಿತ್ರದಿಂದ ಪ್ರೇರಿತವಾಗಿ ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಜೀತ್‌ಸಿಂಗ್ ಧಿಲ್ಲೋನ್ ಅವರು ‘ಕಾಶ್ಮೀರಿಯತ್ ಸೂಫಿಯತ್ ಇನ್ಸಾನಿಯತ್ ’ ಎಂಬ ಹೃದಯಸ್ಪರ್ಶಿ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ.

  ಆಗಸ್ಟ್ 20ರಂದು ಸೇನಾಪಡೆಯ ವಾಹನವೊಂದು ಲೇತ್ ಪೊರಾ ಸಮೀಪದ ಹೆದ್ದಾರಿಯಲ್ಲಿ ಸ್ಕಿಡ್ ಆಗಿ, ಮನೆಯೊಂದಕ್ಕೆ ಢಿಕ್ಕಿ ಹೊಡೆದಿತ್ತು. ಗಾಯಾಳು ಸೈನಿಕರ ಅಕ್ರಂದನ ಕೇಳಿದ ಟೈಲರ್ ವೃತ್ತಿಯ ಆಯಾಝ್ ಧರ್ ಅವರು ಕೂಡಲೇ ತನ್ನ ಕೆಲಸವನ್ನು ನಿಲ್ಲಿಸಿ, ಇತರ ಸ್ಥಳೀಯರೊಂದಿಗೆ ಅವಘಡದ ಸ್ಥಳಕ್ಕೆ ಧಾವಿಸಿ, ಕೆಲವೇ ಕ್ಷಣಗಳಲ್ಲಿ ವಾಹನದಲ್ಲಿದ್ದ ಸೈನಿಕರನ್ನು ಕಾಪಾಡಿದರು.

“ವಾಹನದ ಚಾಲಕ ಗಾಯಗೊಂಡಿದ್ದು, ಅವರ ಹಣೆಯಿಂದ ರಕ್ತ ಸೋರುತ್ತಿತ್ತು. ನಾವು ಕೂಡಲೇ ನೀರು, ಆಹಾರ ಹಾಗೂ ಪ್ರಥಮ ಚಿಕಿತ್ಸೆಯ ಕಿಟ್ ತಂದೆವು ಹಾಗೂ ಗಾಯಾಳುಗಳ ಚಿಕಿತ್ಸೆಯಲ್ಲಿ ತೊಡಗಿದೆವು” ಎಂದು ಧಾರ್ ಹೇಳಿದ್ದಾರೆ.

 ‘‘ ಈ ಸಂದರ್ಭದಲ್ಲಿ ನಮಗ್ಯಾರಿಗೂ ಕೋವಿಡ್-19 ಸೋಂಕಿನ ಸಾಧ್ಯತೆಯ ಬಗ್ಗೆ ಯೋಚನೆಯೇ ಬರಲಿಲ್ಲ. ಸೈನಿಕನೊಬ್ಬನ ತಲೆಯಿಂದ ಸೋರುತ್ತಿದ್ದ ರಕ್ತವನ್ನು ನಿಲ್ಲಿಸಲು ಮಹಿಳೆಯೊಬ್ಬರು ತನ್ನ ಪುತ್ರನಿಗೆ, ಆಕೆಯ ಸ್ಕಾರ್ಫ್ ಅನ್ನು ತಂದುಬರುವಂತೆ ತಿಳಿಸಿದರು ಹಾಗೂ ಅದನ್ನು ಗಾಯಾಳು ಯೋಧನ ತಲೆಗೆ ಕಟ್ಟಿದರು. ಕಾಶ್ಮೀರಿಯತ್ ಎಂದರೆ ಇದೆ, ನಾವು ಸದಾ ಈ ಸಿದ್ಧಾಂತವನ್ನು ಅನುಸರಿಸುತ್ತೇವೆ’’ ಎಂದು ದಾರ್ ಹೇಳಿದ್ದಾರೆ.

 ಕಾಶ್ಮೀರ ಕಣಿವೆಯಲ್ಲಿ ಭದ್ರತಾಪಡೆಗಳ ಮೇಲೆ ಕಲ್ಲೆಸೆತದ ಘಟನೆಗಳು ಹಾಗೂ ಘರ್ಷಣೆಗಳು ಸದಾ ಸುದ್ದಿಯಾಗುತ್ತಿರುತ್ತವೆ. ಆದರೆ ಕಾಶ್ಮೀರದ ಜನತೆ ಹಾಗೂ ಭದ್ರತಾಪಡೆಗಳ ನಡುವೆ ಅನ್ಯೋನ್ಯತೆಯನ್ನು ಸಾರುವ ಘಟನೆಗಳು ಬಹುತೇಕ ಸಂದರ್ಭಗಳಲ್ಲಿ ವರದಿಯಾಗದೆ ಇರುವುದು ವಿಪರ್ಯಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News