ಚಿನ್ನ ಕಳ್ಳ ಸಾಗಾಟ ಪ್ರಕರಣ: ಸ್ವಪ್ನಾ ಸುರೇಶ್‌ಗೆ ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಾಲಯ
Update: 2020-08-21 21:34 IST
ಕೊಚ್ಚಿ, ಆ. 21: ಕೇರಳ ಚಿನ್ನ ಅಕ್ರಮ ಸಾಗಾಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವಪ್ನಾ ಸುರೇಶ್ ಅವರ ಜಾಮೀನು ಮನವಿಯನ್ನು ವಿಶೇಷ ನ್ಯಾಯಾಲಯ ಶುಕ್ರವಾರ ತಳ್ಳಿ ಹಾಕಿದೆ.
ವಿದೇಶದಿಂದ ಚಿನ್ನ ಕಳ್ಳ ಸಾಗಾಟ ಹಾಗೂ ಪಿತೂರಿಯಲ್ಲಿ ತನ್ನ ಪಾತ್ರವಿದೆ ಎಂದು ಸ್ವಪ್ನಾ ಸುರೇಶ್ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಆಕೆಗೆ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.
ಸ್ವಪ್ನಾ ಸುರೇಶ್ ಸಲ್ಲಿಸಿರುವ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿರುವ ಜಾರಿ ನಿರ್ದೇಶನಾಲಯ, ಇತರ ಆರೋಪಿಗಳೊಂದಿಗೆ ಹಾಗೂ ಅಪರಾಧದಲ್ಲಿ ಭಾಗಿಯಾದ ಇತರ ಕೆಲವರೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಆರೋಪಿ ಬಹಿರಂಗಪಡಿಸಿದ್ದಾಳೆ ಎಂದು ತಿಳಿಸಿದೆ. ಆರೋಪಿಗೆ ಜಾಮೀನು ನೀಡಿದರೆ, ತನಿಖೆಯ ಪ್ರಗತಿಗೆ ಅಡ್ಡಿ ಉಂಟಾಗಬಹುದು. ತನಿಖೆ ಪ್ರಗತಿಯಲ್ಲಿದೆ. ಅಪರಾಧಕ್ಕೆ ಸಂಬಂಧಿಸಿದ ವ್ಯಕ್ತಿಗಳು ಹಾಗೂ ಪ್ರಭಾವಿಗಳ ತನಿಖೆ ನಡೆಸಬೇಕಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.