×
Ad

ಕೊರೋನ ಸೋಂಕಿಗೆ ತನ್ನಲ್ಲಿ ಔಷಧ ಇದೆ ಎಂದ ಆಯುರ್ವೇದ ವೈದ್ಯನಿಗೆ 10 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

Update: 2020-08-21 21:39 IST

 ಹೊಸದಿಲ್ಲಿ, ಆ. 21: ಕೊರೋನ ಸೋಂಕಿಗೆ ತನ್ನಲ್ಲಿ ಔಷಧ ಇದೆ. ತಾನು ಕೊರೋನ ಸೋಂಕನ್ನು ಗುಣಪಡಿಸಬಲ್ಲೆ ಎಂದು ಪ್ರತಿಪಾದಿಸಿ ಆಯುರ್ವೇದ ವೈದ್ಯರೊಬ್ಬರ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್ ಈ ಮನವಿ ತಿರಸ್ಕರಿಸಿರುವುದೇ ಅಲ್ಲದೆ, ವೈದ್ಯನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಜಗತ್ತಿನಾದ್ಯಂತ ಇದುವರೆಗೆ 8 ಲಕ್ಷ ಜನರ ಸಾವಿಗೆ ಕಾರಣವಾದ ಕೊರೋನ ವೈರಸ್ ಸೋಂಕನ್ನು ಗುಣಪಡಿಸುವ ಔಷಧವನ್ನು ತಾನು ಸಂಶೋಧಿಸಿದ್ದೇನೆ ಎಂದು ಪ್ರತಿಪಾದಿಸಿ ಹರ್ಯಾಣದ ನಿವಾಸಿ ಓಂಪ್ರಕಾಶ್ ವೇದ್ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಓಂಪ್ರಕಾಶ್ ವೇದ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಈ ರೀತಿ ಕ್ಷುಲ್ಲಕ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಸಲ್ಲಿಸುವವರಿಗೆ ಕಠಿಣ ಸಂದೇಶ ನೀಡಲು ನಿರ್ಧರಿಸಿತು.

ದಿನನಿತ್ಯ ಹೆಚ್ಚುತ್ತಿರುವ ಕೊರೋನ ಸೋಂಕಿನ ಹೊಸ ಪ್ರಕರಣಗಳೊಂದಿಗೆ ಹೋರಾಟ ನಡೆಸಲು ದೇಶಾದ್ಯಂತ ವೈದ್ಯರು ಹಾಗೂ ಆಸ್ಪತ್ರೆಗಳು ತನ್ನ ಕೋವಿಡ್-19 ಔಷಧ ಬಳಸಬಹುದು ಎಂದು ಆಯುರ್ವೇದ ವೈದ್ಯ ಓಂಪ್ರಕಾಶ್ ಅವರು ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಪ್ರತಿಪಾದಿಸಿದ್ದರು.

ಆಯುರ್ವೇದ, ಔಷಧ ಹಾಗೂ ಶಸ್ತ್ರಚಿಕಿತ್ಸೆ (ಬಿಎಎಂಎಸ್)ಯಲ್ಲಿ ಪದವಿ ಪಡೆದಿರುವ ಓಂಪ್ರಕಾಶ್, ಪ್ರಸ್ತುತ ಆಯುರ್ವೇದ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೋನ ಸೋಂಕಿನ ಚಿಕಿತ್ಸೆಗೆ ತನ್ನ ಔಷಧ ಬಳಸಲು ಕೇಂದ್ರ ಸರಕಾರ ಹಾಗೂ ಆರೋಗ್ಯ ಇಲಾಖೆಗೆ ಆದೇಶಿಸುವಂತೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News