ಬೆಳ್ತಂಗಡಿಯ ಯಾಕೂಬ್, ಕಲಬುರ್ಗಿಯ ಸುರೇಖಾ ಸೇರಿ ದೇಶದ 47 ಶಿಕ್ಷಕರಿಗೆ ‘ರಾಷ್ಟ್ರೀಯ ಶಿಕ್ಷಕ’ ಪ್ರಶಸ್ತಿ

Update: 2020-08-21 16:49 GMT

ಹೊಸದಿಲ್ಲಿ: ರಾಜ್ಯದ ಇಬ್ಬರು ಶಿಕ್ಷಕರು ಸೇರಿ ದೇಶದ 47 ಶಿಕ್ಷಕರನ್ನು ‘ರಾಷ್ಟ್ರೀಯ ಶಿಕ್ಷಕ’ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಶಿಕ್ಷಣ ಸಚಿವಾಲಯದ ವೆಬ್ ಸೈಟ್ ನಲ್ಲಿ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ರಾಜ್ಯದಲ್ಲಿ ಬೆಳ್ತಂಗಡಿ ನಡ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಯಾಕೂಬ್ ಎಸ್. ಮತ್ತು ಕಲಬುರ್ಗಿಯ ಅಫ್ಝಲ್ ಪುರದ ಬಂದರ್ ವಾಡ್ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಸುರೇಖಾ ಜಗನ್ನಾಥ್, ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದ ಮುಖ್ಯ ಶಿಕ್ಷಕ ಚೆಮ್ಮಲ್ಲಾರ್ ಷಣ್ಮುಗಂ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿಯ ಮಾದರಿ ಶಿಕ್ಷಕ ಯಾಕೂಬ್

ಸರಕಾರಿ ಶಾಲೆಯಲ್ಲಿ ಗಣಿತ ಪ್ರಯೋಗಾಲಯವನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದ ಗಣಿತ ಶಿಕ್ಷಕ ಯಾಕೂಬ್ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿರುವ ಇವರು ಸರಕಾರಿ ಶಾಲೆಯ ಮಕ್ಕಳಿಗೆ ವಿಶಿಷ್ಟ ರೀತಿಯಲ್ಲಿ ಸುಲಭವಾಗಿ ಗಣಿತ ಕಲಿಸಲು ಊರವರ ಸಹಾಯದಿಂದ ಗಣಿತ ಪ್ರಯೋಗಾಲಯವನ್ನು ಆರಂಭಿಸಿದ್ದರು.

ಸುಲಭ ಗಣಿತ ಕಲಿಕೆಗಾಗಿ ಇವರು ಮಾಡಿರುವ ಪ್ರಯೋಗಗಳು ರಾಜ್ಯದಾದ್ಯಂತ ಗಮನ ಸೆಳೆದಿದ್ದು,  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಇದೀಗ ರಾಷ್ಟ್ರೀಯ ಪ್ರಶಸ್ತಿಯೂ ಒಲಿದಿದೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

''ಪ್ರಶಸ್ತಿ ಬಂದಿರುವುದು ತುಂಬಾ ಸಂತಸವಾಗಿದೆ. ಪ್ರಮಾಣಿಕವಾಗಿ ಮಾಡಿರುವ ಪ್ರಯತ್ನಕ್ಕೆ ಇದೊಂದು ಪ್ರೋತ್ಸಾಹ. ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಪ್ರಯತ್ನಿಸಿದ್ದೇನೆ. ಎಲ್ಲರ ಸಹಕಾರದಿಂದ ಅದು ಸಾಧ್ಯವಾಗಿದೆ. ನನ್ನ ಪ್ರಯತ್ನದೊಂದಿಗೆ ಕೈಜೋಡಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಧನ್ಯವಾದಗಳು.''

- ಯಾಕೂಬ್, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News