ಈ ವರ್ಷ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಾಗದು: ಸು.ಕೋರ್ಟ್

Update: 2020-08-21 16:53 GMT

  ಹೊಸದಿಲ್ಲಿ,ಆ.21: ಕೊರೋನ ಸೋಂಕಿನ ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವುದಕ್ಕೆ ತಾನು ಒಲವು ಹೊಂದಿಲ್ಲವೆಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವೆಂದು ಅದು ಅಭಿಪ್ರಾಯಿಸಿದೆ.

  ‘‘ಜನಸಂದಣಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯವಾದ ಕಾರಣ ಗಣೇಶೋತ್ಸವಗಳನ್ನು ಆಚರಣೆಗೆ ನಾವು ಒಲವು ಹೊಂದಿಲ್ಲ’’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಹೇಳಿದ್ದಾರೆ.

 ಜೈನ ಮಂದಿರಗಳಲ್ಲಿ ವಾರ್ಷಿಕ ಪರಿಯೂನ ವಿಧಿಗಳ ಆಚರಣೆಗಾಗಿ ಮುಂಬೈನ ಕೆಲವು ನಿರ್ದಿಷ್ಟ ಜೈನ ಮಂದಿರಗಳನ್ನು ತೆರೆಯುವುದಕ್ಕೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೈನ ಮಂದಿರಗಳನ್ನು ತೆರೆಯುವುದಕ್ಕೆ ಮಹಾರಾಷ್ಟ್ರ ಸರಕಾರ ವಿರೋಧ ವ್ಯಕ್ತಪಡಿಸಿತ್ತು. ಒಂದು ವೇಳೆ ಅನುಮತಿ ನೀಡಿದ್ದೇ ಆದಲ್ಲಿ, ಅದನ್ನೇ ಆಧಾರವಾಗಿಟ್ಟುಕೊಂಡು ಪ್ರತಿಯೊಂದು ಸಮುದಾಯವು ತಮಗೂ ಹಬ್ಬಗಳ ಆಚರಣೆಗೆ ಅನುಮತಿಯನ್ನು ಪಡೆಯಲು ಕೋರ್ಟ್ ಮೆಟ್ಟಲೇರ ಬಹುದು ಎಂದು ವಾದಿಸಿತ್ತು.

 ಸರಕಾರದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಮನು ಸಿಂಘ್ವಿ ಅವರು ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಆಚರಣೆಯ ಬಗ್ಗೆ ಉಲ್ಲೇಖಿಸುತ್ತಾ, ಈ ಉತ್ಸವಕ್ಕೂ ಅನುಮತಿಯನ್ನು ಕೋರಿದಲ್ಲಿ ಯಾವ ಪರಿಸ್ಥಿತಿಯುಂಟಾಗಿತ್ತೆಂದು ಕಲ್ಪಿಸಿಕೊಳ್ಳಿ ಎಂದು ಆ ರಾಜ್ಯದವರೇ ಅದ ಭಾರತದ ಮುಖ್ಯ ನ್ಯಾಯಮೂರ್ತಿ ಬೋಬ್ಡೆಯವರಲ್ಲಿ ನಿವೇದಿಸಿದರು.

   ಆದರೆ ಗಣೇಶೋತ್ಸವವು ಸಂಪೂರ್ಣವಾಗಿ ವಿಭಿನ್ನವಾದ ರೀತಿಯಲ್ಲಿ ಆಚರಿಸುವ ಪ್ರಕ್ರಿಯೆಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News