ಮಂಗಳೂರು : ಉದ್ಯಮಿ ಹಾಜಿ ಕೆ. ಖಾಲಿದ್ ಬಾವಾ ನಿಧನ
ಮಂಗಳೂರು : ನಗರದ ಕಂದಕ್ ನಿವಾಸಿ ದಿ. ಹಾಜಿ ಕೆ. ಅಬ್ದುಲ್ ಖಾದರ್ ಬಾವಾ ಅವರ ಪುತ್ರ ಉದ್ಯಮಿ ಹಾಜಿ ಕೆ. ಖಾಲಿದ್ ಬಾವಾ (88) ಅವರು ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದರು.
ಖಾಲಿದ್ ಬಾವಾ ಅವರು ಝೀನತ್ ಬಕ್ಷ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು. ಸುಮಾರು 25 ವರ್ಷ ಕಂಕನಾಡಿ ಜುಮಾ ಮಸೀದಿಯ ಖಜಾಂಚಿಯಾಗಿದ್ದರು. ಬದ್ರಿಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಇಸ್ಲಾಮಿಕ್ ಅಕಾಡಮಿ ಆಫ್ ಎಜುಕೇಶನ್ ದೇರಳಕಟ್ಟೆ ಇದರ ನಿರ್ದೇಶಕರಾಗಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ದಿವಂಗತ ಯೆನೆಪೊಯ ಮೊಯ್ದಿನ್ ಕುಂಞಿ ಅವರ ಅಳಿಯನಾಗಿರುವ ಖಾಲಿದ್ ಬಾವಾ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ರವಿವಾರ ಬೆಳಗ್ಗೆ ಝೀನತ್ ಬಕ್ಷ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.