ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿಯಿಂದ ಹೊಸ ಪಕ್ಷ: ಸಿಎಎ ಹೋರಾಟಗಾರ ಅಖಿಲ್ ಗೊಗೋಯಿ ಸಿಎಂ ಅಭ್ಯರ್ಥಿ

Update: 2020-08-23 14:27 GMT

ಗುವಾಹಟಿ, ಆ. 23: ಮುಂಬರುವ ಅಸ್ಸಾಂ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷ ರೂಪಿಸಲಾಗುವುದು ಹಾಗೂ ಕಾರಾಗೃಹದಲ್ಲಿರುವ ಸಂಘಟನೆಯ ನಾಯಕ ಅಖಿಲ್ ಗೊಗೋಯಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗಿರಲಿದ್ದಾರೆ ಎಂದು ಕೃಷಿಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್‌ಎಸ್) ಶನಿವಾರ ಪ್ರಕಟಿಸಿದೆ.

 ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ ಅಧ್ಯಕ್ಷ ಭಾಸ್ಕೊ ಡೆ ಸೈಕಿಯಾ ಅವರು, ಅಖಿಲ್ ಗೊಗೋಯಿ ಅವರು ಕಾರಾಗೃಹದಿಂದ ಬಿಡುಗಡೆಯಾದ ಬಳಿಕ ಪಕ್ಷದ ಹೆಸರು ಘೋಷಿಸಲಿದ್ದಾರೆ ಎಂದರು.

“ನಾವು ನೂತನ ರಾಜಕೀಯ ಪಕ್ಷ ರೂಪಿಸಲು ಸಿದ್ಧರಾಗುತ್ತಿದ್ದೇವೆ. ಇದು ಪ್ರಾದೇಶಿಕ ಪಕ್ಷ. ಎಲ್ಲ ಬುಡಕಟ್ಟು, ಜಾತಿ, ಸಮುದಾಯ, ಧರ್ಮ ಹಾಗೂ ಭಾಷೆಗಳ ಜನರು ಈ ಪಕ್ಷದ ಭಾಗವಾಗಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ನೂತನ ಪಕ್ಷ ಯಾವುದಕ್ಕೂ ರಾಜಿ ಮಾಡಿಕೊಳ್ಳದ ರಾಜಕೀಯ ಪಕ್ಷ. ಇದಕ್ಕೆ ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿಯ ಹಿಂದಿನ ಪ್ರಯತ್ನವಾದ ಗಣ ಮುಕ್ತಿ ಸಂಗ್ರಾಮ್-ಅಸ್ಸಾಂ ಎಂದು ಹೆಸರು ಇರಿಸುವುದಿಲ್ಲ. ಹೊಸ ಹೆಸರು ಇರಿಸಲಾಗುವುದು ಎಂದರು.

“ಅಕ್ಟೋಬರ್ ಒಳಗೆ ಅಖಿಲ್ ಗೊಗೋಯಿ ಅವರು ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ ಎಂಬುದು ನಮ್ಮ ನಿರೀಕ್ಷೆ. ನಮಗೆ ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಂಬಿಕೆ ಇದೆ. ಕಾರಾಗೃಹದಿಂದ ಬಿಡುಗಡೆಯಾದ ಬಳಿಕ ಅವರು ನೂತನ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ. ಪಕ್ಷದ ಹೆಸರನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ” ಎಂದು ಅವರು ತಿಳಿಸಿದರು.

ನೂತನ ಪಕ್ಷದ ಕೆಲಸದ ಕಾರ್ಯಸೂಚಿ ಹಾಗೂ ಸಂವಿಧಾನದಂತಹ ಎಲ್ಲ ಬೌದ್ಧಿಕ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

“ಅಖಿಲ್ ಗೊಗೋಯಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಯೇ ?” ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೌದು, ಅಖಿಲ್ ಗೊಗೋಯಿ ಅವರು 2021ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವರು ಮುಖ್ಯಮಂತ್ರಿ ಅಭ್ಯರ್ಥಿ ಆಗಿರಲಿದ್ದಾರೆ ಎಂದು ಭಾಸ್ಕೊ ಡೆ ಸೈಕಿಯಾ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜೊರ್ಹಾತ್ ಉಪ ಆಯುಕ್ತರ ಕಚೇರಿ ಹೊರಗೆ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಅಖಿಲ್ ಗೊಗೋಯಿ ಅವರನ್ನು ಡಿಸೆಂಬರ್‌ನಲ್ಲಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News