ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಕಚೇರಿ ಮುಂದೆ ಪ್ರತಿಭಟನೆ
ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರು ಕಳೆದ ವರ್ಷ ನಡೆದ ಪ್ರವಾಹದ ಸಂದರ್ಭದಲ್ಲಿ 'ಕಾಳಜಿ ಫಂಡ್' ಹೆಸರಿನಲ್ಲಿ ಸಂಹ್ರಹಿಸಿದ ಹಣದ ಲೆಕ್ಕಕೊಡಿ ಎಂದು ಬೆಳ್ತಂಗಡಿಯಲ್ಲಿ ಶಾಸಕರ ಕಚೇರಿ ಮುಂದೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಮೊದಲು ಮಾಜಿ ಶಾಸಕ ವಸಂತ ಬಂಗೇರ ಅವರ ಕಚೇರಿಯ ಮುಂಭಾಗದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಬಳಿಕ ಶಾಸಕರ ಸರಕಾರಿ ಕಚೇರಿ ಮುಂಭಾಗಕ್ಕೆ ಮೆರವಣಿಗೆಯಲ್ಲಿ ತೆರಳಲು ಪ್ರಯತ್ನಿಸಿದ ವೇಳೆ ಪೊಲೀಸರು ಅವರನ್ನು ತಡೆಯಲು ಮುಂದಾಗಿದ್ದು, ಈ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾಕಾರರು ಶಾಸಕ ಹರೀಶ್ ಪೂಂಜ ಅವರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ವಸಂತ ಬಂಗೇರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿದನ್, ಜಿ.ಪಂ. ಸದಸ್ಯ ಸಾಹುಲ್ ಹಮೀದ್ ಹಾಗೂ ಇತರ ಮುಖಂಡರುಗಳು ಭಾಗವಹಿಸಿದ್ದರು.
ಲೆಕ್ಕ ಕೊಡಿ ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ: ಬಂಗೇರ
ಶಾಸಕರು ಕಾಳಜಿ ಫಂಡ್ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ಸಂಗ್ರಹಿಸಲಾಗಿದ್ದು, ಶಾಸಕರು ಕೂಡಲೇ ಅದರ ಲೆಕ್ಕ ಕೊಡಬೇಕು ಸಂಗ್ರಹಿಸಲಾಗಿರುವ ದಿನ ಬಳಕೆಯ ಸಾಮಗ್ರಿಗಳ ಲೆಕ್ಕವನ್ನೂ ನೀಡಬೇಕು ಹಾಗೂ ಸಂಗ್ರಹಿಸಿರುವ ಹಣವನ್ನು ಹದಿನೈದು ದಿನಗಳಲ್ಲಿ ಸಂತ್ರಸ್ತರಿಗೆ ನೀಡದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.
- ಕೆ ವಸಂತ ಬಂಗೇರ, ಮಾಜಿ ಶಾಸಕರು ಬೆಳ್ತಂಗಡಿ