ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದು ಆಗ್ರಹಿಸಿದ ಅಹ್ಮದ್ ಪಟೇಲ್

Update: 2020-08-24 11:41 GMT

ಹೊಸದಿಲ್ಲಿ: ರಾಹುಲ್ ಗಾಂಧಿಯೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಬೇಕೆಂದು ಇಂದು ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಹಿರಿಯ ನಾಯಕ ಅಹ್ಮದ್ ಪಟೇಲ್ ಆಗ್ರಹಿಸಿದ್ದಾರೆ. ಅವರ ಈ ಅಭಿಪ್ರಾಯವನ್ನು ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯನಿರ್ವಹಣಾ ಶೈಲಿಯನ್ನು ಪ್ರಶ್ನಿಸಿ ಹಾಗೂ ಅಮೂಲಾಗ್ರ ಸುಧಾರಣೆಯನ್ನು ಆಗ್ರಹಿಸಿ ಕಾಂಗ್ರೆಸ್ ನಾಯಕರ ಒಂದು ಗುಂಪು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ನಂತರ ಸೋನಿಯಾ ತಾನು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದಿದೆ.

ಸೋನಿಯಾ ಗಾಂಧಿಗೆ ಪತ್ರ ಬರೆದವರ ಪೈಕಿ ಗುಲಾಮ್ ನಬಿ ಆಝಾದ್, ಆನಂದ್ ಶರ್ಮ ಹಾಗೂ ಮುಕುಲ್ ವಾಸ್ನಿಕ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಕಾರ್ಯಕಾರಿ ಸಭೆ ಮುಂದುವರಿದಿದ್ದು  ಪತ್ರಕ್ಕೆ ಸಹಿ ಹಾಕಿದವರ ಪೈಕಿ ಯಾರೂ  ಇನ್ನೂ ಮಾತನಾಡಿಲ್ಲ.

ಸೋನಿಯಾ ಗಾಂಧಿಯೇ ಪಕ್ಷಾಧ್ಯಕ್ಷೆಯಾಗಿ ಮುಂದುವರಿಯಬೇಕೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಸಚಿವ ಎಕೆ ಆ್ಯಂಟನಿ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸಿಎಂಗಳೂ ಸೋನಿಯಾ ಅವರೇ ಮುಂದುವರಿಯಬೇಕೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News