ಕೊರೋನಾ ಹೆಸರಿನಲ್ಲಿ ಜನರ ಜೀವದೊಂದಿಗೆ ಚೆಲ್ಲಾಟ ಬೇಡ: ಜೆಡಿಎಸ್
ಉಡುಪಿ, ಆ.24: ಹಲವು ತಿಂಗಳುಗಳಿಂದ ಕೊರೋನ ವಿಶ್ವದಾದ್ಯಂತ ತಾಂಡವಾಡುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸುಲಿಗೆ ಹಾಗೂ ಬೇರೆ ಬೇರೆ ರೀತಿಯ ದಬ್ಬಾಳಿಕೆ ನಡೆಸುತ್ತಿರುವುದಾಗಿ ಆರೋಪಿಸುವ ಹಲವು ಆರೋಪಗಳು ಕೇಳಿಬರುತ್ತಿದೆ ಎಂದು ಜಿಲ್ಲಾ ಜಾತ್ಯತೀತ ಜನತಾ ದಳ ಪ್ರಕಟಣೆಯಲ್ಲಿ ತಿಳಿಸಿದೆ.
ಆ.21ರಂದು ನಿಧನರಾದ ಕಾಪು ಪಡು ಗ್ರಾಮದ ನಿವಾಸಿ ರಕ್ಷಾ ಅವರ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದನ್ನು ಮುಚ್ಚಿ ಹಾಕಲು ಕೊರೋನಾ ಪಾಸಿಟಿವ್ ಎಂಬ ವರದಿಯನ್ನು ನೀಡಲಾಗಿದೆ ಎಂಬುದು ಕುಟುಂಬಸ್ಥರ ಆರೋಪ ಹಾಗೂ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಪರಿಹಾರ ನೀಬೇಕು ಎಂದು ಪಕ್ಷ ಒತ್ತಾಯಿಸಿದೆ.
ಇನ್ನು ಕುಂದಾಪುರದಲ್ಲಿ ವೃದ್ಧನ ಶವದ ಬದಲು ಯುವಕನ ಶವವನ್ನು ರುದ್ರಭೂಮಿಗೆ ಕಳುಹಿಸಿ ಅದರಲ್ಲೂ ಗೊಂದಲ ಸೃಷ್ಟಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಕೊರೋನಾ ಹೆಸರಿನಲ್ಲಿ ಜನರನ್ನು ಬೆದರಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಇದು ಕೂಡಲೇ ನಿಲ್ಲಬೇಕಾಗಿದೆ. ಇದಕ್ಕೆ ಆಸ್ಪದ ನೀಡದೆ ಇಂತಹ ಘಟನೆಗಳು ಮರುಕಳಿಸದಂತೆ ಉಡುಪಿ ಜಿಲ್ಲಾಡಳಿತ ಎಚ್ಚರವಹಿಸಬೇಕು ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯ ಯೋಗೇಶ್ ವಿ. ಶೆಟ್ಟಿ ಆಗ್ರಹಿಸಿದ್ದಾರೆ.