ಬಿಜೆಪಿಯಿಂದ ವಿಶ್ವಕರ್ಮ ಸಮುದಾಯದ ನಂಬಿಕೆಗೆ ದ್ರೋಹ : ವಿಶ್ವಕರ್ಮ ಮಹಾಸಭಾ ಆರೋಪ
ಉಡುಪಿ, ಆ.24: ರಾಜ್ಯದ 45 ಲಕ್ಷ ಮಂದಿ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿ ಪಕ್ಷಕ್ಕೆ ಅಧಿಕಾರ ತರಲು ಸಹಕರಿಸಿದ್ದಾರೆ. ಆದರೆ ಬಿಜೆಪಿಯಿಂದ ವಿಶ್ವಕರ್ಮರ ನಂಬಿಕೆಗೆ ದ್ರೋಹವಾಗಿದೆ. ವಿಶ್ವಾಸ ದ್ರೋಹ ಮಾಡಿದರೆ ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಎಲ್ಲಡೆಯು ಯುವಕರ ಸಂಘಟನೆಯನ್ನು ಗ್ರಾಮ ಗ್ರಾಮಗಳಲ್ಲಿ ಮಾಡಿ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮಗೆ ಗೌರವ ಸ್ಥಾನ ಮಾನ ನೀಡಿದರೆ ಸಾಕಾಗುವುದಿಲ್ಲ. ಬದಲಿಗೆ ಅಧಿಕಾರದ ಶಕ್ತಿ ನೀಡಬೇಕು. ನೇಕಾರರು, ಮೀನುಗಾರರ ಸಾಲ ಮನ್ನಾದಂತೆ ಅತಿ ಶೀಘ್ರ ವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಬೇಕು. ಜೊತೆಗೆ ವಿಶ್ವಕರ್ಮ ಸಮುದಾಯವನ್ನು ಸಂಕಷ್ಟದಿಂದ ಪಾರು ಮಾಡಲು ತುರ್ತಾಗಿ 300 ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊರೋನ ಸಂಕಷ್ಟದಿಂದ ವಿಶ್ವಕರ್ಮ ಸಮುದಾಯವರಿಗೆ ಬದುಕುವುದೇ ಕಷ್ಟವಾಗಿದೆ. ಕಾರ್ಮಿಕರೇ ಹೆಚ್ಚಾಗಿರುವ ನಮ್ಮ ಸಮುದಾಯ ದಲ್ಲಿ ನಮ್ಮ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ. ಒಂದೆರಡು ಜಾತಿಗೆ ಕೊರೋನ ಆರ್ಥಿಕ ಪ್ಯಾಕೇಜ್ ನೀಡಿರುವ ಮುಖ್ಯಮಂತ್ರಿ, ಬಹುತೇಕ ಕಾರ್ಮಿಕರೆ ಇರುವ ವಿಶ್ವಕರ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ದೇವಸ್ಥಾನಗಳಲ್ಲಿ ಅವಕಾಶ ಇಲ್ಲ
ಎಲ್ಲ ಕಡೆಗಳಲ್ಲಿ ದೇವಸ್ಥಾನವನ್ನು ಕಟ್ಟಿಸಿ ಕೊಡುವುದು ವಿಶ್ವಕರ್ಮ ಸಮು ದಾಯ. ಆದರೆ ನಂತರ ಸರಕಾರ ನೇಮಿಸುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಅವಕಾಶಗಳೇ ಇಲ್ಲ. ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ಎಲ್ಲ ದೇವಸ್ಥಾನಗಳಲ್ಲಿ ನಮ್ಮನ್ನು ದೂರ ಇಡುತ್ತಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಷ್ಟು ಮಂದಿ ವಿಶ್ವಕರ್ಮ ರಿಗೆ ಅವಕಾಶ ನೀಡಿದ್ದಾರೆ ಎಂದು ರಮೇಶ್ ಆಚಾರ್ಯ ಪ್ರಶ್ನಿಸಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ 2 ಜನ ವಿಶ್ವಕರ್ಮರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕು. ರಾಜ್ಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ನಿಗಮ ಮಂಡಳಿ, ಕಾರ್ಪೋರೇಶನ್‌ಗಳಲ್ಲಿ ಕನಿಷ್ಠ 4 ಮಂದಿ ವಿಶ್ವಕರ್ಮರಿಗೆ ರಾಜಕೀಯವಾಗಿ ಪ್ರಾತಿನಿಧ್ಯದ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದರು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಗೆಲುವಿಗೆ ವಿಶ್ವಕರ್ಮರು ವಿಶೇಷ ಪ್ರಯತ್ನ ಪಟ್ಟಿದ್ದಾರೆ. ಆದರೆ ಗೆದ್ದ ಬಳಿಕ ಅವರು ಸಮುದಾಯಕ್ಕೆ ಏನು ಮಾಡಿಲ್ಲ. ವಿಶ್ವಕರ್ಮರಿಗೆ ಎಲ್ಲಾ ವಿಚಾರದಲ್ಲೂ ಅನ್ಯಾಯ ಆಗುತ್ತಿದೆ. ಹೀಗೆ ಪರಿಸ್ಥಿತಿ ಮುಂದುವರಿದರೆ ಇಂತವರಿಗೆ ತಕ್ಕ ಪಾಠ ಕಲಿಸಲು ಸಮುದಾಯ ಸದೃಢವಾಗಿದೆ ಎಂದು ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ಆಚಾರ್ಯ ಬ್ಯೆಂದೂರು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಮುಖಂಡ ಎಚ್. ರಮೇಶ್ ಆಚಾರ್ಯ ಹೆಬ್ರಿ, ಬೈಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್ ಆಚಾರ್ಯ, ವಿಶ್ವಕರ್ಮ ಸಮಾಜದ ಹಿರಿಯರಾದ ಬಾರ್ಕೂರು ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು.
‘ಧರ್ಮದ ಹೆಸರಿನಲ್ಲಿ ಯುವಕರನ್ನು ಕೆರಳಿಸಬೇಡಿ’
ಸಂಘದ ಹೆಸರಿನಲ್ಲಿ ಯುವ ಸಮುದಾಯವನ್ನು ಮರಳು ಮಾಡಿ ಪ್ರಚೋದಿಸಿದರೆ ಸಾಲದು. ಯುವ ಸಮುದಾಯಕ್ಕೆ ಉದ್ಯೋಗ ನೀಡಿ ಬದುಕು ಗಟ್ಟಿಗೊಳಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ ಎಂದು ನೇರಂಬಳ್ಳಿ ರಮೇಶ್ ಆಚಾರ್ಯ ಹೇಳಿದರು.
ಧರ್ಮ, ಜಾತಿಯ ಹೆಸರಿನಲ್ಲಿ ಯುವಕರನ್ನು ಕೆರಳಿಸಿ ಪ್ರಚೋದಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪೃವೃತ್ತಿ ಮಾಡಬಾರದು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಯುವಕರ ಮನಸ್ಸು ಅರಳಿಸುವ ಕೆಲಸ ಮಾಡಬೇಕೆ ಹೊರತು ಕೆರಳಿಸಿ ದಾರಿ ತಪ್ಪಿಸಬಾರದು ಎಂದು ಅವರು ಟೀಕಿಸಿದರು.