×
Ad

ಗುರುಪುರ ಗುಡ್ಡಕುಸಿತ ಪ್ರಕರಣ: ಸಂತ್ರಸ್ತ 70 ಕುಟುಂಬಕ್ಕೆ ತಲಾ 10 ಸಾವಿರ ರೂ. ಪರಿಹಾರ

Update: 2020-08-24 20:12 IST

ಮಂಗಳೂರು, ಆ.24: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟಿನಲ್ಲಿ ಜುಲೈ 5ರಂದು ಸಂಭವಿಸಿದ ಗುಡ್ಡ ಕುಸಿತ ದುರ್ಘಟನೆಯಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡ 70 ಕುಟುಂಬಗಳಿಗೆ ಸರಕಾರದಿಂದ ತಲಾ 10,000 ರೂ. ಪರಿಹಾರ ಪ್ರಕಟಗೊಂಡಿದೆ.

ಗುಡ್ಡ ಕುಸಿತದ ಬಳಿಕ ಮನೆ ಕಳೆದುಕೊಂಡ ಕುಟುಂಬಗಳಿಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರೂ ಈವರೆಗೂ ತಿಂಗಳ ಬಾಡಿಗೆ 2,500 ರೂ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ ಎಂದು ಸಂತ್ರಸ್ತರು ದೂರಿದ್ದರು. ಆ ಹಿನ್ನೆಲೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಸೋಮವಾರ ಜಿಲ್ಲಾಡಳಿತದೊಂದಿಗೆ ತುರ್ತು ಸಮಾಲೋಚನೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿದರು.

ಅದರಂತೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸಂತ್ರಸ್ತರ ಬ್ಯಾಂಕ್ ಖಾತೆಗೆ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್(ಪ್ರಕೃತಿ ವಿಕೋಪ) ಮಾರ್ಗಸೂಚಿಯಂತೆ ಪ್ರಥಮ ಹಂತದ ತಲಾ 10,000 ರೂ. (ಒಟ್ಟು 7 ಲಕ್ಷ ರೂ.) ಪರಿಹಾರ ಧನ ಮಂಜೂರು ಮಾಡಿ ಪ್ರಕಟನೆ ಹೊರಡಿಸಿದ್ದಾರೆ.

ಸಂತ್ರಸ್ತರಿಗೆ ಉಳಿದ ಪರಿಹಾರ ಹಾಗೂ ಬಾಕಿ ಇರುವ ಎಲ್ಲರಿಗೂ ಹಕ್ಕುಪತ್ರ ನೀಡುವಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅರ್ಹರಿಗೆ ಹಕ್ಕುಪತ್ರ ನೀಡಿವಲ್ಲಿ ಶಾಸಕರು ಬದ್ಧರಾಗಿದ್ದಾರೆಂದು ಸ್ಥಳೀಯ ಬಿಜೆಪಿ ಮುಖಂಡ ರಾಜೇಶ್ ಸುವರ್ಣ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿರುವ ಸಂತ್ರಸ್ತರಿಗೆ ಶೀಘ್ರ ಬಾಡಿಗೆ ಮೊತ್ತ ಮಂಜೂರು ಮಾಡಬೇಕು ಮತ್ತು ಹಕ್ಕುಪತ್ರ ಸಿಗದ ಕುಟುಂಬಗಳಿಗೆ ಇನ್ನಷ್ಟು ವಿಳಂಬ ಮಾಡದೆ ಹಕ್ಕುಪತ್ರ ನೀಡಬೇಕು. ಇಲ್ಲವಾದಲ್ಲಿ ಸಂತ್ರಸ್ತರ ಬೆಂಬಲಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗುರುಪುರ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಜಿಎಂ ಉದಯ ಭಟ್ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News