ವಿಕಲಚೇತನರ ಮೀಸಲಾತಿ ಏರಿಕೆಗೆ ಸಿಎಂಗೆ ಮನವಿ: ಸಚಿವ ಕೋಟ
ಮಂಗಳೂರು, ಆ.24: ವಿಕಲಚೇತರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರಲು ಸರಕಾರದಿಂದ ಅನೇಕ ಯೋಜನೆಗಳಲ್ಲಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದರ ಜೊತೆ ವಿವಿಧ ಇಲಾಖೆಯಲ್ಲಿ ಸರಕಾರಿ ಹುದ್ದೆಗೆ ಅವಕಾಶ ನೀಡಲಾಗಿದೆ. ಇದರಿಂದ ಅವರು ಸ್ವಾವಲಂಬನೆ ಜೀವನ ಸಾಗಿಸಲು ಸಾಧ್ಯವಾಗಿದೆ. ವಿಕಲಚೇತನರ ಮೀಸಲಾತಿ ಏರಿಕೆಗೆ ಸಿಎಂಗೆ ಮನವಿ ಮಾಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ದ.ಕ.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿ., ಕೃತಕ ಅಂಗಾಂಗ ತಯಾರಿಕಾ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ), ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಘಟಕದ ಸಹಯೋಗದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಕಲಚೇತನರಿಗೆ ಸಲಕರಣೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೈದ್ಯಾಧಿಕಾರಿಗಳು ಅಂಗವಿಕಲ ಪ್ರಮಾಣ ಪತ್ರವನ್ನು ನೀಡುವ ಸಂದರ್ಭ ಕೇವಲ ಅಂಕಗಳನ್ನು ಆಧರಿಸದೆ ವಿಕಲತೆಯನ್ನು ಮನಗೊಂಡು ಅವರಿಗೆ ಪ್ರಮಾಣ ಪತ್ರ ನೀಡಬೇಕು. ಅಂಗವಿಕಲರಿಗೆ ದೊರಕುವ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ನೀಡಬೇಕು. ಸೌಲಭ್ಯದಿಂದ ಯಾರು ಕೂಡ ವಂಚಿತರಾಗಬಾರದು. ಎಲ್ಲಾ ವಿಕಲಚೇತನರಿಗೆ ಸರಕಾರದ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಅಧಿಕಾರಿಗಳು ಸರ್ವೇ ನಡೆಸಿ ವರದಿಯನ್ನು ಸಿದ್ಧಪಡಿಸಬೇಕು ಎಂದು ಸಚಿವ ಕೋಟ ಸೂಚಿಸಿದರು.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಎಂಆರ್‌ಪಿಎಲ್ ಡಿಜಿಎಂ ವೀಣಾ ಮಾತನಾಡಿ ಕಳೆದ 16 ವರ್ಷದಿಂದ ಎಂಆರ್‌ಪಿಎಲ್ ಸಂಸ್ಥೆಯು ವಿಕಲಚೇತನರಿಗೆ 2.5 ಕೋ.ರೂ. ಮೊತ್ತದ ಸಲಕರಣೆಯನ್ನು ನೀಡಿದೆ ಎಂದರು.
ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್, ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಡಿ. ಯಮುನಾ ಉಪಸ್ಥಿತರಿದ್ದರು.
ಈ ಸಂದರ್ಭ 2018-19 ಮತ್ತು 2019-20 ನೇ ಸಾಲಿನ 12 ದ್ವಿಚಕ್ರ ವಾಹನ, ಟಾಕಿಂಗ್ ಲ್ಯಾಪ್‌ಟಾಪ್ ಯೋಜನೆಯಡಿ 10 ಲ್ಯಾಪ್‌ಟಾಪ್, ಎಂಆರ್‌ಪಿಎಲ್ ವತಿಯಿಂದ 45 ಲಕ್ಷ ರೂ. ಮೌಲ್ಯದ ವಿವಿಧ ಸಾಧನ ಸಲಕರಣೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.