ಕೊರೋನ ಪರೀಕ್ಷೆ, ಚಿಕಿತ್ಸೆಯ ಬಗ್ಗೆ ಸುಳ್ಳು ಆರೋಪ; ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಣ್ಯ ಕ್ರಮ: ಉಡುಪಿ ಡಿಸಿ
ಉಡುಪಿ, ಆ. 24: ಹಗಲು ರಾತ್ರಿ ಶ್ರಮ ವಹಿಸಿ ಕೆಲಸ ಮಾಡುವ ಕೊರೋನ ವಾರಿಯರ್ಸ್‌ಗಳ ವಿರುದ್ಧ ಕೆಲವು ಕಿಡಿಗೇಡಿಗಳು ದಾಖಲೆಗಳಿಲ್ಲದೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಆರೋಗ್ಯ ಸಿಬ್ಬಂದಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗು ತ್ತಿದೆ. ಅಂತಹ ಕಿಡಿಗೇಡಿಗಳಿಗೆ ಬುದ್ದಿ ಕಲಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಹಿಂಜರಿಯುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಡಿಯೋ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿ, ಈ ರೀತಿ ಸುಳ್ಳು ಆರೋಪ ಮಾಡುವುದ ರಿಂದ ಕೊರೋನ ವಾರಿಯರ್ಸ್‌ಗಳಿಗೆ ಅವಮಾನ ಮಾಡಿದಂತಾಗುತ್ತದೆ. ಇಂತಹ ಅವಮಾನ ಸಹಿಸಿ ಸುಮ್ಮನೆ ಇರಲು ಆಗುವುದಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದ್ದರೆ, ದಾಖಲೆ ಸಮೇತ ಸಂಬಂಧಪಟ್ಟ ತನಿಖಾಧಿಕಾರಿಗಳಿಗೆ ನೀಡಬೇಕು. ಅದು ಬಿಟ್ಟು ದಾಖಲೆಗಳಿಲ್ಲದೆ ಪರೀಕ್ಷೆಯಲ್ಲಿ ಹಾಗೂ ಚಿಕಿತ್ಸೆಯಲ್ಲಿ ಭ್ರಷ್ಟಾಚಾರ ಆಗುತ್ತಿದೆ ಎಂದು ಹೇಳುವುದು ಸರಿಯಲ್ಲ. ಹೀಗೆ ದಾಖಲೆ ಇಲ್ಲದೆ ಮಾತನಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಹೆಚ್ಚು ಹಣ ಪಡೆದರೆ ಕ್ರಮ
ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿ ಪಡಿಸಿದ ಹಣದಲ್ಲಿಯೇ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಅದಕ್ಕಿಂತ ಹೆಚ್ಚಿನ ಹಣ ಪಡೆಯುವ ಪ್ರಕರಣ ಕಂಡುಬಂದರೆ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕೊರೋನ ಪರೀಕ್ಷೆಯಲ್ಲಿ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪ ಸುಳ್ಳು. ಹೆಚ್ಚು ಹೆಚ್ಚು ರೋಗ ಪತ್ತೆ ಹಚ್ಚುವ ಪರೀಕ್ಷೆ ಮಾಡುತ್ತಿರುವುದು ಹಣ ಮಾಡುವ ಉದ್ದೇಶದಿಂದ ಅಲ್ಲ. ಕೊರೋನ ಪರೀಕ್ಷೆಗಾಗಿ ಖಾಸಗಿ ಪ್ರಯೋಗಾಲಯಕ್ಕೆ ಸರಕಾರ 1500ರೂ. ನಿಗದಿಪಡಿಸಿದೆ. ಸರಕಾರಿ ಪ್ರಯೋಗಾಲಯದಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಹಣಕಾಸಿನ ವ್ಯವಹಾರ ನಡೆಯುವುದಿಲ್ಲ. ಖಾಸಗಿ ಆಸ್ಪತ್ರೆಗೆ ನಾವು ಈವರೆಗೆ ನಯಾ ಪೈಸೆ ಹಣ ಪಾವತಿಸಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಉಡುಪಿ ಜಿಲ್ಲೆಯಲ್ಲಿ ಇಂದು ಹೆಚ್ಚು ಹೆಚ್ಚು ಕೊರೋನ ಪರೀಕ್ಷೆ ಮಾಡು ವುದರಿಂದ ಪಾಸಿಟಿವ್ ಪ್ರಕರಣಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ, ರೋಗಿಗೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಾಗುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ಪಾಸಿಟಿವ್ ಬಂದ ಶೇ.90ರಷ್ಟು ಮಂದಿಗೆ ರೋಗದ ಲಕ್ಷ್ಮಣಗಳೇ ಇರುವು ದಿಲ್ಲ. ಅಂತವರಿಗೆ ಮನೆಯಲ್ಲಿಯೇ ಇರಲು ಅವಕಾಶ ಮಾಡಿಕೊಡುತ್ತೇವೆ. ಉಸಿರಾಟ ತೊಂದರೆ, ವಿಪರೀತ ಜ್ವರ ಇರುವವರು ಮಾತ್ರ ಆಸ್ಪತ್ರೆಗೆ ದಾಖ ಲಾಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಮೃತದೇಹ ಅದಲುಬದಲು: ನೋಟೀಸ್ ಜಾರಿ
ಕೊರೋನ ಸೋಂಕಿತರ ಮೃತದೇಹ ಅದಲು ಬದಲಾಗಿರುವ ವಿಚಾರಕ್ಕೆ ಸಂಬಂಧಿಸಿ ಮೃತದೇಹ ನಿರ್ವಹಣೆಗಾಗಿ ರಚಿಸಲಾಗಿರುವ ಸಮಿತಿಯ ಸದಸ್ಯರಿಗೆ ನೋಟೀಸ್ ಜಾರಿ ಮಾಡಿ, ವಿವರಣೆ ಪಡೆಯಲಾಗುವುದು. ಒಂದು ವೇಳೆ ಅವರಿಂದ ತಪ್ಪಾಗಿದ್ದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ರಕ್ಷಾ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯದ ಕುರಿತು ತನಿಖೆ ನಡೆಸಲು ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ತನಿಖೆ ನಡೆಸಿ ವರದಿ ನೀಡಲಿದೆ. ವರದಿಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಆಗಿರುವುದು ಕಂಡುಬಂದರೆ ಸಂಬಂಧಪಟ್ಟ ಆಸ್ಪತ್ರೆಯ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಅವರು ಹೇಳಿದ್ದಾರೆ.