ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಕಿಟ್ ವಿತರಣೆ
ಮಂಗಳೂರು, ಆ.24: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಹಲವಾರು ಸವಲತ್ತುಗಳು ಸಿಗುತ್ತಿವೆ. ಕಾರ್ಮಿಕರ ಸಂಘಟನೆಗಳ ಅವಿಶ್ರಾಂತ ಹೋರಾಟಗಳೇ ಇದಕ್ಕೆ ಕಾರಣ. ಆದರೆ ಕಾರ್ಮಿಕರು ಇನ್ನೂ ಎಚ್ಚೆತ್ತಿಲ್ಲ. ಸದಸ್ಯರಾಗಿ ನೋಂದಾಯಿತರಾಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ನೋಂದಾಯಿತರಾದ 63 ಸಾವಿರ ಕಾರ್ಮಿಕರಲ್ಲಿ ಕೇವಲ 18 ಸಾವಿರ ಕಾರ್ಮಿಕರು ಚಂದಾ ನವೀಕರಿಸುತ್ತಿದ್ದಾರೆ. ಉಳಿದವರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಕಾರ್ಮಿಕರು ಎಚ್ಚೆತ್ತುಕೊಂಡು ಸಕ್ರಿಯರಾಗಬೇಕು ಎಂದು ಮಂಗಳೂರು ವಿಭಾಗದ ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ ಎಲಿಜಬೆತ್ ಹೇಳಿದರು.
ಕಾರ್ಮಿಕ ಇಲಾಖೆ ಹಾಗೂ ಎಐಟಿಯುಸಿ ಸಹಯೋಗದಲ್ಲಿ ಮಂಗಳೂರಿನ ಕಾಮ್ರೇಡ್ ಬಿ.ವಿ. ಕಕ್ಕಿಲ್ಲಾಯ ಭವನದ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ನಡೆದ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಮಂಜೂರಾದ ಆರೋಗ್ಯ ಕಿಟ್ (ಮಾಸ್ಕ್, ಸಾಬೂನು, ಸ್ಯಾನಿಟೈಸರ್) ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ರಾಜಕಾರಣಿಗಳು ಕಟ್ಟಡ ಕಾರ್ಮಿಕರಲ್ಲದ ಅನೇಕರಿಗೆ ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಸೆಸ್ ಹಣ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಇದರಿಂದ ನಿಜವಾದ ಕಟ್ಟಡ ಕಾರ್ಮಿಕರು ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಎಲ್ಲಾ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಬೇಕು. ಸಕಾಲದಲ್ಲಿ ನಿಮಗಿರುವ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆಯಿಂದ ಪಡೆಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಕಾರ್ಮಿಕ ಇಲಾಖೆ ನೀಡುವ ಧನ ಸಹಾಯವನ್ನು ಪಡೆದು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದು ಎಐಟಿಯುಸಿ ನೇತೃತ್ವದ ಕಟ್ಟಡ ಕಾರ್ಮಿಕರ ಸಂಘದ ದ.ಕ. ಜಿಲ್ಲಾ ಕಾರ್ಯದರ್ಶಿ ಎಂ. ಕರುಣಾಕರ್ ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ನಿರೀಕ್ಷಕ ಮೇರಿ ಡಯಾಸ್, ಎಐಟಿಯುಸಿ ನಾಯಕ ಬಿ.ಶೇಖರ್ ಮಾತನಾಡಿದರು. ತಿಮ್ಮಪ್ಪಕಾವೂರು ಸ್ವಾಗತಿಸಿ, ವಂದಿಸಿದರು