×
Ad

ಅಕ್ರಮ ಹಣ ವರ್ಗಾವಣೆ ಪ್ರಕರಣ: ನೀರವ್ ಮೋದಿ ಪತ್ನಿ ವಿರುದ್ಧ ರೆಡ್ ಕಾರ್ನರ್ ನೋಟಿಸ್

Update: 2020-08-25 14:49 IST

ಹೊಸದಿಲ್ಲಿ, ಆ. 24: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್ ಮೋದಿ ಅವರ ಪತ್ನಿ ಆಮಿ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸು ಜಾರಿ ಮಾಡಿದೆ.

ಆಮಿ ಮೋದಿ 2019ರಲ್ಲಿ ಅಮೆರಿಕದಲ್ಲಿ ಕೆಲವು ಬಾರಿ ಕಾಣಿಸಿಕೊಂಡಿದ್ದರು. ಆದರೆ, ಅವರು ಇರುವ ಸ್ಥಳದ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಇಲ್ಲ. ನೀರವ್ ಮೋದಿಯನ್ನು ಇಂಗ್ಲೆಂಡ್‌ನಲ್ಲಿ ಬಂಧಿಸಲಾಗಿದೆ. ಆದರೆ, ಅವರು ಗಡಿಪಾರಿನ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ 3 ಕೋಟಿ ಡಾಲರ್ ಮೌಲ್ಯದ ಎರಡು ಅಪಾರ್ಟ್‌ಮೆಂಟ್‌ಗಳ ಖರೀದಿಯಲ್ಲಿ ಪಾಲುದಾರರಾಗಿರುವ ಆರೋಪದ ಹಿನ್ನೆಲೆಯಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಾರಿ ನಿರ್ದೇಶನಾಲಯ ಪೂರಕ ಆರೋಪ ಪಟ್ಟಿಯಲ್ಲಿ ಆಮಿ ಮೋದಿ ಅವರ ಹೆಸರು ಸೇರಿಸಿತ್ತು. ಕಳೆದ ಅಕ್ಟೋಬರ್‌ನಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಲಂಡನ್‌ನ 56.97 ಕೋಟಿ ರೂಪಾಯಿ ವೌಲ್ಯದ ಫ್ಲಾಟ್ ಸೇರಿದಂತೆ 637 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಸೊತ್ತಿನ ಭಾಗ ಈ ಅಪಾರ್ಟ್‌ಮೆಂಟ್‌ಗಳು. ನೀರವ್ ಮೋದಿ, ಸಹೋದರ ನಿಹಾಲ್ (ಬೆಲ್ಚಿಯನ್ ಪ್ರಜೆ) ಹಾಗೂ ಸಹೋದರಿಗೆ ಇಂಟರ್ ಪೋಲ್ ಈಗಾಗಲೇ ರೆಡ್ ಕಾರ್ನರ್ ನೋಟಿಸು ಹೊರಡಿಸಿದೆ.

ನೀರವ್ ಮೋದಿ 6,498.20 ಕೋಟಿ ರೂಪಾಯಿ ಮೊತ್ತದ ನಿಧಿಯನ್ನು ಅಕ್ರಮ ವರ್ಗಾವಣೆ ಮಾಡಿರುವುದಾಗಿ ಆರೋಪಿಸಿ ಸಿಬಿಐ ಕಳೆದ ಮೇಯಲ್ಲಿ ಆರೋಪ ಪಟ್ಟಿ ಸಲ್ಲಿಸಿತ್ತು. ಇದಲ್ಲದೆ, 7,080.86 ಕೋಟಿ ರೂಪಾಯಿಯನ್ನು ಮೆಹುಲ್ ಚೋಕಿ ವಂಚಿಸಿದ್ದಾರೆ ಎಂದು ಆರೋಪಿಸಿತ್ತು. ಸಿಬಿಐ ವಿಚಾರಣೆ ಆರಂಭವಾಗುವುದಕ್ಕಿಂತ ಮುನ್ನವೇ ಇವರಿಬ್ಬರು 2018ರಲ್ಲಿ ಭಾರತದಿಂದ ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News