ಪ್ರಶಾಂತ್ ಭೂಷಣ್ ಪ್ರಕರಣ: ಶಿಕ್ಷೆಯ ಪ್ರಮಾಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಆ. 25: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಶಿಕ್ಷೆಯ ಪ್ರಮಾಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾದಿರಿಸಿದೆ.
ನ್ಯಾಯಾಂಗ ನಿಂದನೆ ಪಕರಣದಲ್ಲಿ ಪ್ರಶಾಂತ್ ಭೂಷಣ್ ದೋಷಿ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 14ರಂದು ತೀರ್ಪು ನೀಡಿತ್ತು. ಪ್ರಶಾಂತ್ ಭೂಷಣ್ ಅವರಿಗೆ ಕ್ಷಮೆ ನೀಡುವಂತೆ ಕೋರಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಮಂಡಿಸಿದ ವಾದವನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಆಲಿಸಿತು.
30 ವರ್ಷಗಳ ವೃತ್ತಿ ಅನುಭವ ಹೊಂದಿರುವ ಪ್ರಶಾಂತ್ ಭೂಷಣ್ ಅವರಂತಹ ಹಿರಿಯ ನ್ಯಾಯವಾದಿಗಳು ವರ್ತಿಸುವ ರೀತಿ ಇದಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಈ ಸಂದರ್ಭ ಪ್ರತಿಪಾದಿಸಿದರು. ನ್ಯಾಯಾಂಗದ ಕುರಿತು ಮಾಡಿದ ಟ್ವೀಟ್ ವಿರುದ್ಧ ದಾಖಲಿಸಲಾದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ನೀಡಿದ ಹೇಳಿಕೆ ಹಾಗೂ ಸ್ಪಷ್ಟೀಕರಣವನ್ನು ಓದುವುದು ನೋವಿನ ಸಂಗತಿ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಪ್ರಶಾಂತ್ ಭೂಷಣ್ ಅವರಿಗೆ ಕ್ಷಮೆ ನೀಡುವಂತೆ ಮನವಿ ಮಾಡಿದ ಬಳಿಕ, ಸುಪ್ರೀಂ ಕೋರ್ಟ್ ನ್ಯಾಯಾಂಗದ ವಿರುದ್ಧದ ಟ್ವೀಟ್‌ಗಳ ಬಗ್ಗೆ ವಿಷಾದ ವ್ಯಕ್ತಪಡಿಸದಿರುವ ತಮ್ಮ ನಿಲುವನ್ನು ಪರಾಮರ್ಶಿಸುವಂತೆ ಪ್ರಶಾಂತ್ ಭೂಷಣ್ ಹಾಗೂ ಅವರ ವಕೀಲರಿಗೆ 30 ನಿಮಿಷಗಳ ಕಾಲಾವಕಾಶ ನೀಡಿತು. ಪ್ರಶಾಂತ್ ಭೂಷಣ್ ಅವರಂತಹ ಹಿರಿಯ ನ್ಯಾಯವಾದಿಗಳು ಪತ್ರಿಕಾಗೋಷ್ಠಿ ನಡೆಸುವುದು, ಟ್ವೀಟ್ ಮಾಡುವುದು ಭೂಷಣವಲ್ಲ. ಈ ರೀತಿ ಮಾಡುವುದರಿಂದ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.
“ಪಾರದರ್ಶಕ ವಿಮರ್ಶೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ನಾವು ಆ ಟೀಕೆಗೆ ಪ್ರತಿಕ್ರಿಯಿಸಲು ಪತ್ರಿಕೆಗಳ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಇದು ನಾವು ಅನುಸರಿಸಬೇಕಾದ ನೀತಿ” ಎಂದು ಅವರು ಹೇಳಿದ್ದಾರೆ. ಮಂಗಳವಾರ ವಿಚಾರಣೆ ವೇಳೆ ಪ್ರಶಾಂತ್ ಭೂಷಣ್ ಪರ ನ್ಯಾಯವಾದಿ ರಾಜೀವ್ ಧವನ್, ಮೊದಲು ಟ್ವೀಟ್ ಅನ್ನು ಉಲ್ಲೇಖಿಸಿದರು ಹಾಗೂ ಸುಪ್ರೀಂ ಕೋರ್ಟ್ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಲಹೆ ನೀಡಲು ಪ್ರಶಾಂತ್ ಭೂಷಣ್ ಪ್ರಯತ್ನಿಸಿರಲಿಲ್ಲ. ಆದರೆ, ಪ್ರಕರಣಕ್ಕೆ ನೀಡುತ್ತಿರುವ ಆದ್ಯತೆ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ ಎಂದು ಪ್ರತಿಪಾದಿಸಿದರು.
ಒಂದು ವೇಳೆ ಪ್ರಶಾಂತ್ ಭೂಷಣ್ ಅವರ ಹೇಳಿಕೆಯನ್ನು ಪೂರ್ಣವಾಗಿ ಓದಿದರೆ, ಅವರಿಗೆ ನ್ಯಾಯಾಂಗದ ಮೇಲೆ ಅತಿ ಹೆಚ್ಚು ಗೌರವ ಇರುವುದನ್ನು, ಆದರೆ, ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಇರುವುದನ್ನು ಹೇಳುತ್ತದೆ ಎಂದು ಅವರು ತಿಳಿಸಿದರು. ಪ್ರಶಾಂತ್ ಭೂಷಣ್ ಅವರನ್ನು ಹುತಾತ್ಮರನ್ನಾಗಿ ಮಾಡಬೇಡಿ ಎಂದು ಧವನ್ ನ್ಯಾಯಾಲಯವನ್ನು ಆಗ್ರಹಿಸಿದರು. ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಬಿಡುವುದು ಹಾಗೂ ನ್ಯಾಯಾಲಯವನ್ನು ವಿಮರ್ಶಿಸುವಾಗ ಸ್ವಲ್ಪ ಸಂಯಮದಿಂದ ವರ್ತಿಸುವಂತೆ ತಿಳಿಸುವುದು ಈ ಪ್ರಕರಣವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗ ಎಂದು ಅವರು ಹೇಳಿದರು. ಅಟಾರ್ನಿ ಜನರಲ್ ಕೆ.ಕೆ. ರಾಜಗೋಪಾಲ್ ಅವರು, ತನ್ನ ಟ್ವೀಟ್‌ಗಳಿಗೆ ಕ್ಷಮೆ ಕೋರಲು ನಿರಾಕರಿಸುವ ಅವರನ್ನು ಎಚ್ಚರಿಕೆ ನೀಡಿ ಬಿಟ್ಟುಬಿಡಿ. ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸಬಾರದು ಎಂದು ಎಚ್ಚರಿಸಿ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.
‘‘ಕ್ಷಮೆ ಕೋರುವುದರಲ್ಲಿ ತಪ್ಪೇನಿದೆ ? ಅದು ಅಪರಾಧದ ಪ್ರತಿಬಿಂಬವೇ ? ಕ್ಷಮೆ ಮಾಂತ್ರಿಕ ಶಬ್ಧ. ಅದು ಹಲವು ವಿಷಯಗಳನ್ನು ಗುಣಪಡಿಸುತ್ತದೆ. ಒಂದು ವೇಳೆ ನೀವು ಯಾರಿಗಾದರೂ ನೋವು ಉಂಟು ಮಾಡಿದ್ದರೆ, ಮುಲಾಮು ಹಚ್ಚಬೇಕು’’ ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದರು.