‘ಮಾನವ ಕಂಪ್ಯೂಟರ್’ ಶಕುಂತಳಾದೇವಿ ಸಾಧನೆ ಮುರಿದ 20 ವರ್ಷದ ಯುವಕ
ಹೈದರಾಬಾದ್: ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿರುವ ಗಣಿತ ತಜ್ಞೆ ಶಕುಂತಳಾ ದೇವಿ ಅವರ ದಾಖಲೆಯನ್ನು ಮುರಿದಿರುವ ಹೈದರಾಬಾದಿನ 20 ವರ್ಷದ ಯುವಕ ಜಗತ್ತಿನ ಅತ್ಯಂತ ವೇಗದ ‘ಮಾನವ ಕ್ಯಾಲ್ಕುಲೇಟರ್’ ಎಂದು ಗುರುತಿಸಲ್ಪಟ್ಟಿದ್ದಾರೆ.
ಹೈದರಾಬಾದಿನ ನೀಲಕಂಠ ಭಾನು ಪ್ರಕಾಶ್ ಎಂಬ ಯುವಕ ಮೈಂಡ್ ಸ್ಪೋಟ್ಸ್ ಒಲಿಂಪಿಯಾಡ್ (ಎಂಎಸ್‍ಒ) ಸ್ಪರ್ಧೆಯಲ್ಲಿ ಮೆಂಟಲ್ ಕ್ಯಾಲ್ಕುಲೇಶನ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಈ ಬಿರುದನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಗಣಿತ(ಹಾನರ್ಸ್) ವಿದ್ಯಾರ್ಥಿಯಾಗಿರುವ ನೀಲಕಂಠ ತನ್ನ ಅತ್ಯಂತ ವೇಗದಿಂದ ಗಣಿತ ಲೆಕ್ಕ ಮಾಡುವ ಪ್ರತಿಭೆಗಾಗಿ ಈಗಾಗಲೇ ಹಲವಾರು ವಿಶ್ವ ದಾಖಲೆಗಳು ಹಾಗೂ 50 ಲಿಮ್ಕಾ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಕ್ಯಾಲ್ಕುಲೇಟರ್‍ನ ವೇಗಕ್ಕಿಂತಲೂ ಅಧಿಕ ವೇಗದಿಂದ ತನ್ನ ಮೆದುಳು ಲೆಕ್ಕ ಮಾಡಬಹುದಾಗಿದೆ ಎಂದು ಭಾನು ಪ್ರಕಾಶ್ ಹೇಳುತ್ತಾರೆ. ಈತ ಮಾಡಿರುವ ದಾಖಲೆಗಳನ್ನು ಈ ಹಿಂದೆ ಗಣಿತ ತಜ್ಞರಾದ ಸ್ಕಾಟ್ ಫ್ಲಾನ್ಸ್‍ಬರ್ಗ್ ಹಾಗೂ ಶಕುಂತಳಾದೇವಿ ಮಾಡಿದ್ದರು.
ಲಂಡನ್ ನಗರದಲ್ಲಿ ಆಗಸ್ಟ್ 15ರಂದು ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್‍ನಲ್ಲಿ 13 ದೇಶಗಳ 57 ವರ್ಷ ವಯಸ್ಸಿನ ತನಕದ 30 ಸ್ಪರ್ಧಿಗಳು ಭಾಗವಹಿಸಿದ್ದರು. ಎರಡನೇ ಮತ್ತು ಮೂರನೇ ಸ್ಥಾನ ಪಡೆದವರಿಗಿಂತ ಭಾನು ಪ್ರಕಾಶ್ 65 ಅಂಕಗಳಷ್ಟು ಮುಂದಿದ್ದರು.
ಮಕ್ಕಳಿಗೆ ಗಣಿತದಲ್ಲಿ ಪ್ರೀತಿ ಮೂಡಿಸುವ ಸಲುವಾಗಿ ವಿಷನ್ ಮ್ಯಾಥ್ಸ್ ಲ್ಯಾಬ್ ಆರಂಭಿಸುವ ಗುರಿಯನ್ನು ನೀಲಕಂಠ ಭಾನು ಹೊಂದಿದ್ದಾರೆ.