×
Ad

‘ಸ್ಯಾನಿಟರಿ ಪ್ಯಾಡ್ ಜತೆಗೆ ಡಯಾಪರ್ ಕೂಡ ಧರಿಸುತ್ತಿದ್ದೇವೆ’: ಪಿಪಿಇ ಕಿಟ್ ಧರಿಸುವ ವೈದ್ಯೆಯರ ಅಳಲು

Update: 2020-08-25 17:38 IST

ಹೊಸದಿಲ್ಲಿ: ಕೋವಿಡ್ 19 ಸಾಂಕ್ರಾಮಿಕದ ಈ ಕಷ್ಟಕರ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಕೊರೋನ ರೋಗಿಗಳಿಗೆ ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ನೀಡುವ ವೈದ್ಯರು, ದಾದಿಯರು, ಇತರ ಕೊರೋನ ಯೋಧರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ವಾಸ್ತವ. ಪಿಪಿಇ ಕಿಟ್ ಧರಿಸಿದಾಗ ಮೈಯ್ಯಿಡೀ ಬೆವರುವುದರ ಜತೆಗೆ ಊಟ ಮಾಡುವುದು ಬಿಡಿ, ಶೌಚಾಲಯಕ್ಕೂ ಹೋಗಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ.

ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಪಂಚಕುಲಾದ ಪಾರಸ್ ಆಸ್ಪತ್ರೆಯ ನರರೋಗ ತಜ್ಞೆ ಡಾ. ಜಸ್ಲೊವಲೀನ್ ಕೌರ್, “ಮೂತ್ರ ವಿಸರ್ಜನೆಗೆ ಸಹಕಾರಿಯಾಗಲು ನಾವು ಡಯಾಪರ್ ಬಳಸುತ್ತೇವೆ'' ಎಂದು ಹೇಳುತ್ತಾರೆ.

ಸತತ ಎಂಟು ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಬೇಕಾಗಿರುವುದರಿಂದ ಮುಟ್ಟಾದ ದಿನಗಳಲ್ಲಿ ಬಹಳಷ್ಟು ಕಷ್ಟವಾಗುತ್ತದೆ. ಸ್ಯಾನಿಟರಿ ಪ್ಯಾಡ್ ಧರಿಸಿ ನಂತರ ಡಯಾಪರ್ ಧರಿಸಬೇಕಾಗುತ್ತದೆ. ಇಲ್ಲಿಯ ತನಕ ಎಕ್ಸ್‍ಎಲ್ ಪ್ಯಾಡ್ ಅಥವಾ ಟ್ಯಾಂಪನ್‍ ಗಳನ್ನು ಬಳಸದ ನಾನು ಈಗ ಅವುಗಳನ್ನು ಧರಿಸಬೇಕಾಗುತ್ತದೆ'' ಎಂದು ಅವರು ವಿವರಿಸುತ್ತಾರೆ.

“ಅಧಿಕ ರಕ್ತಸ್ರಾವದ ಸಮಸ್ಯೆಯಿರುವವರು ಕೆಲವೊಮ್ಮೆ ಎರಡು ಪ್ಯಾಡ್ ಅಥವಾ ಹೆಚ್ಚು ಪ್ಯಾಡ್‍ಗಳನ್ನು ಪಿಪಿಇ ಕಿಟ್ ಧರಿಸಿರುವಾಗ ಧರಿಸಬೇಕಾಗುತ್ತದೆ, ಇದು ಎಷ್ಟು ಅನಾನುಕೂಲಕರ ಎಂಬುದು ಎಲ್ಲರಿಗೂ ಅರ್ಥವಾಗಬಹುದು,'' ಎಂದು ನೊಯ್ಡಾದ ಮದರ್ ಹುಡ್ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ. ಸಂದೀಪ್ ಛಡ್ಡ ಹೇಳುತ್ತಾರೆ.

ಬದಲಿಸುವ ಅವಕಾಶವಿಲ್ಲದೆ ಗಂಟೆಗಟ್ಟಲೆ ಒಂದೇ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪನ್‍ನಲ್ಲಿರುವುದರಿಂದ ಸೋಂಕಿನ ಸಮಸ್ಯೆಗಳೂ ಕಾಡಬಹುದು ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯೆ ಡಾ. ರಿಚಾ ಸರೀನ್ ಹೇಳುತ್ತಾರೆ.

“ಜತೆಗೆ ಋತುಸ್ರಾವದ ದಿನಗಳಲ್ಲಿ ಎದುರಾಗುವ ಒತ್ತಡ ಕೂಡ ವ್ಯತಿರಿಕ್ತ ಪರಿಣಾಮ ಬೀರಬಹುದು, ಅತಿ ರಕ್ತಸ್ರಾವವಾದಾಗ ಅಥವಾ ನೋವಿದ್ದಾಗ ಸಮಸ್ಯೆ ಉಲ್ಬಣವಾಗಬಹುದು'' ಎಂದು ನವಿ ಮುಂಬೈನ ಆಸ್ಪತ್ರೆಯೊಂದರ ನರ್ಸಿಂಗ್ ಮ್ಯಾನೇಜರ್ ಆರತಿ ಮಾಧವಿ ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News