ಪುಲ್ವಾಮ ದಾಳಿ: ಒಂದೂವರೆ ವರ್ಷದ ನಂತರ 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎನ್‍ಐಎ

Update: 2020-08-25 12:30 GMT

ಹೊಸದಿಲ್ಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರ ದಾಳಿ ನಡೆದು ಒಂದೂವರೆ ವರ್ಷಗಳ ನಂತರ ರಾಷ್ಟ್ರೀಯ ತನಿಖಾ ಏಜನ್ಸಿ ಮಂಗಳವಾರ ಜಮ್ಮುವಿನ ನ್ಯಾಯಾಲಯವೊಂದರಲ್ಲಿ 5,000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು theprint.in ವರದಿ ಮಾಡಿದೆ.

ಈ ಚಾರ್ಜ್ ಶೀಟ್‍ನಲ್ಲಿ ಜೈಶ್ ಮುಖ್ಯಸ್ಥ ಮೌಲಾನ ಮಸೂದ್ ಅಝರ್, ಆತನ ಸೋದರ ಅಬ್ದುಲ್ ರವೂಫ್ ಅಸ್ಗರ್ ಹಾಗೂ ಇತರರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆಯಲ್ಲದೆ, ‘ಆರೋಪಿಗಳು ಪಾಕಿಸ್ತಾನದ ಅಣತಿಯಂತೆ ಈ ದಾಳಿ ನಡೆಸಿದ್ದಾರೆ' ಎಂದು ತಿಳಿಸಲಾಗಿದೆ.

ಈ ದಾಳಿಗೆ ಬಳಸಲಾದ ಸ್ಫೋಟಕಗಳಾದ ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರೀನ್ ಹಾಗೂ ಆರ್‍ ಡಿಎಕ್ಸ್ ಇವುಗಳು ನಾಲ್ಕು ತಿಂಗಳ ಅವಧಿಯಲ್ಲಿ ಪಾಕಿಸ್ತಾನದಿಂದ ಬಂದಿದ್ದವು ಎಂದೂ ಚಾರ್ಜ್ ಶೀಟ್‍ ನಲ್ಲಿ ಹೇಳಲಾಗಿದೆ. ದಾಳಿಯಲ್ಲಿ ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವ ಸಲುವಾಗಿ ಎಲ್ಲಾ ತಾಂತ್ರಿಕ ಹಾಗೂ ಫಾರೆನ್ಸಿಕ್ ಸಾಕ್ಷ್ಯಗಳೊಂದಿಗೆ ಎನ್‍ಐಎ ಈ ಚಾರ್ಜ್ ಶೀಟ್ ಸಿದ್ಧಪಡಿಸಿದೆಯೆನ್ನಲಾಗಿದೆ.

ಮಸೂದ್ ಅಝರ್ ಹಾಗೂ ಆತನ ಸೋದರನ ಹೊರತಾಗಿ ಜೈಶ್ ಸಂಘಟನೆಯ ಇತರರಾದ ಶಾಕಿರ್ ಬಶೀರ್ ಮಗ್ರೆ,  ಮುಹಮ್ಮದ್ ಅಬ್ಬಾಸ್ ರಾದರ್, ಮುಹಮ್ಮದ್ ಇಕ್ಬಾಲ್ ರಾದರ್, ವೈಝ್-ಉಲ್ ಇಸ್ಲಾಂ, ಇನ್ಶಾ ಜನ್, ತಾರಿಖ್ ಅಹ್ಮದ್ ಶಾ ಹಾಗೂ ಬಿಲಾಲ್ ಅಹ್ಮದ್ ಕುಚೆ ಅವರ ಹೆಸರುಗಳು ಉಲ್ಲೇಖಗೊಂಡಿದ್ದು ದಾಳಿಕೋರರಿಗೆ ಸಹಕಾರ ನೀಡಿದ ಆರೋಪದ ಮೇಲೆ ಇವರನ್ನು ಕಾಶ್ಮಿರದ ವಿವಧೆಡೆಗಳಿಂದ ಕಳೆದೊಂದು  ವರ್ಷದ ಅವಧಿಯಲ್ಲಿ ಬಂಧಿಸಲಾಗಿತ್ತು.

ಆತ್ಮಾಹುತಿ ಬಾಂಬರ್ ಆದಿಲ್ ಅಹ್ಮದ್, ಜೆಇಎಂ ಉಗ್ರರಾದ ಮುದಸಿರ್ ಅಹ್ಮದ್ ಖಾನ್, ಖರಿ ಮುಫ್ತಿ ಯಾಸಿರ್, ಕಮ್ರಾನ್ ಹಾಗೂ ಸಜ್ಜದ್ ಅಹ್ಮದ್ ಭಟ್ ಹೆಸರುಗಳೂ ಉಲ್ಲೇಖಗೊಂಡಿವೆ, ಆದರೆ ಇವರೆಲ್ಲರೂ ಕಳೆದ ವರ್ಷ ಭದ್ರತಾ ಪಡೆಗಳ ಜತೆಗಿನ ಗುಂಡಿನ ಕಾಳಗದಲ್ಲಿ ಹತರಾಗಿರುವುದರಿಂದ ಅವರನ್ನು ಆರೋಪಿಗಳೆಂದು ನಮೂದಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News