ಸೆಪ್ಟೆಂಬರ್‌ನಲ್ಲಿ ಜೆಇಇ, ನೀಟ್ ಪರೀಕ್ಷೆ: ವಿದ್ಯಾರ್ಥಿಗಳು ಪಾಲಿಸಬೇಕಾದ ಮಾರ್ಗಸೂಚಿಗಳಿವು…

Update: 2020-08-25 14:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಆ.25: ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಹಾವಳಿಯ ನಡುವೆ ಈ ವರ್ಷದ ಜೆಇಇ, ನೀಟ್ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾ ರ್ಥಿಗಳು ಮಾಸ್ಕ್ ಹಾಗೂ ಕೈಗವಸುಗಳನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ , ಅಲ್ಲದೆ ಪರೀಕ್ಷಾ ಕೇಂದ್ರಕ್ಕೆ ತಾವೇ ಕುಡಿಯುವ ನೀರು ಹಾಗೂ ಸ್ಯಾನಿಟೈಸರನ್ನು ತರಬೇಕಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಕುರಿತಾಗಿಯೂ ವಿಸ್ತೃತವಾದ ಸೂಚನೆಗಳನ್ನು ಪ್ರವೇಶಪತ್ರದಲ್ಲಿ ನೀಡಲಾಗುತ್ತದ.

 ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಥರ್ಮಲ್ ಸ್ಕಾನಿಂಗ್ ತಪಾಸಣೆಗೊಳಗಾಗಬೇಕುತ್ತದೆ. ದೇಹದ ತಾಪಮಾನ 99.4 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಅಧಿಕವಾಗಿರುವ ಅಭ್ಯರ್ಥಿಗಳು ‘‘ ಐಸೋಲೇಶನ್ ಕೊಠಡಿಗಳಲ್ಲಿ’’ ಪರೀಕ್ಷೆ ಬರೆಯಬೇಕಾಗುತ್ತದೆ.

 ಕೊರೋನ ರೋಗಲಕ್ಷಣಗಳಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಿಯಮಗಳನ್ನು ರೂಪಿಸಿದೆ. ಆದರೂ, ಜೆಇಇ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ತಮಗೆ ಕೊರೋನ ವೈರಸ್‌ನಂತಹ ಯಾವುದೇ ರೋಗಲಕ್ಷಣಗಳಿಲ್ಲ ಅಥವಾ ಕೋವಿಡ್-19ನಿಂದ ನರಳುತ್ತಿಲ್ಲ ಅಥವಾ ಇತ್ತೀಚೆಗೆ ಯಾವುದೇ ಕೊರೋನ ಪಾಸಿಟಿವ್ ರೋಗಿಗಳ ಜೊತೆ ಸಂಪರ್ಕದಲ್ಲಿಲ್ಲ ಎಂಬುದಾಗಿ ಸ್ವಯಂಘೋಷಣೆ ಮಾಡಬೇಕಾಗಿದೆ.

  ಆದರೆ ಕಂಟೈನ್‌ಮೆಂಟ್ ವಲಯಗಳಲ್ಲಿರುವ, ರೋಗಲಕ್ಷಣಗಳಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದೇ ಎಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳು ಯಾವುದೇ ಸ್ಪಷ್ಟನೆ ನೀಡಿಲ್ಲ.

  ಕೋವಿಡ್-19 ಸಾಂಕ್ರಾಮಿಕ ಹಾಗೂ ಹಲವಾರು ರಾಜ್ಯಗಳಲ್ಲಿ ನೆರೆಹಾವಳಿಯ ಹಿನ್ನೆಲೆಯಲ್ಲಿ ಐಐಟಿ ಹಾಗೂ ವೈದ್ಯಕೀಯ ಪ್ರವೇಶಕೋರ್ಸ್‌ಗಳ ಪರೀಕ್ಷೆಗಳನ್ನು ಮುಂದೂಡುವಂತೆ, ಬಲವಾದ ಬೇಡಿಕೆಯಿದ್ದರೂ ಎನ್‌ಟಿಎ ಇಂದು ಮಾರ್ಗದರ್ಶಿಸೂತ್ರಗಳನ್ನು ಪ್ರಕಟಿಸಿರುವುದು ಕೇಂದ್ರ ಸರಕಾರವು ಆ ಪರೀಕ್ಷೆಗಳನ್ನು ನಡೆಸುವ ನಿರ್ಧಾರಕ್ಕೆ ಬದ್ಧವಾಗಿರುವುದನ್ನು ಸೂಚಿಸುತ್ತದೆ ಎಂದು ವರದಿಗಳು ಹೇಳಿವೆ.

   ಜೆಇಇ (ಮೈನ್) ಪರೀಕ್ಷೆಯು ಸೆಪ್ಟೆಂಬರ್ 1ರಿಂದ 6ರ ನಡುವೆ ನಡೆಯಲಿದೆ ಹಾಗೂ ಸೆಪ್ಟೆಂಬರ್ 13ರಂದು ದೇಶಾದ್ಯಂತ ನಗರಕೇಂದ್ರಗಳಲ್ಲಿ ನೀಟ್ (ಸ್ನಾತಕ) ಪರೀಕ್ಷೆಯನ್ನು ಆಯೋಜಿಸಲಾಗಿದ್ದು, 15 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News