×
Ad

ಒಂದಲ್ಲ ಒಂದು ದಿನ ಅವರು ಸಂವಿಧಾನವನ್ನು ನದಿಗೆಸೆಯುತ್ತಾರೆ: ಕೇಂದ್ರದ ವಿರುದ್ಧ ಫಾರೂಕ್ ಅಬ್ದುಲ್ಲಾ ಟೀಕೆ

Update: 2020-08-25 20:09 IST

ಹೊಸದಿಲ್ಲಿ,ಆ.25: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಪಡಿಸಿದ್ದಕ್ಕಾಗಿ ಕೇಂದ್ರವನ್ನು ಬಲವಾಗಿ ಟೀಕಿಸಿರುವ ನ್ಯಾಶನಲ್ ಕಾನ್ಫರೆನ್ಸ್ ವರಿಷ್ಠ ಫಾರೂಕ್ ಅಬ್ದುಲ್ಲಾ ಅವರು ಮೋದಿ ಸರಕಾರವು ಸಂವಿಧಾನದಲ್ಲಿ ನಂಬಿಕೆಯಿರಿಸಿಲ್ಲವೆಂದು ಹೇಳಿದ್ದಾರೆ.

‘ದಿ ಹಿಂದೂ’ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈಗಲೂ ಬಂಧನದಲ್ಲಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ವಿಶೇಷ ಸ್ಥಾನಮಾನ ರದ್ದತಿಗಾಗಿ ಕೇಂದ್ರದ ಜೊತೆ ಸಹಕರಿಸದೆ ಇದ್ದ ಕಾರಣಕ್ಕಾಗಿ ಯಾತನೆ ಪಡುತ್ತಿದ್ದಾರೆ ಎಂದರು.

‘‘ದಿಲ್ಲಿಯಲ್ಲಿದ್ದು ಆಳ್ವಿಕೆ ನಡೆಸುವ ಜನರಿಗೆ ಸಂವಿಧಾನದಲ್ಲಿ ನಂಬಿಕೆಯಿಲ್ಲ’’ ಎಂದವರು ಪತ್ರಿಕೆಗೆ ತಿಳಿಸಿದರು. ‘‘ ಅವರನ್ನು ಅವರ ದಾರಿಗೆ ಬಿಟ್ಟುಬಿಟ್ಟರೆ, ಒಂದಲ್ಲ ಒಂದು ದಿನ ಅವರು ಸಂವಿಧಾನವನ್ನು ಗಂಗಾ ಅಥವಾ ಯಮುನಾ ನದಿಗೆ ಎಸೆಯಲಿದ್ದಾರೆ. ಈ ಫ್ಯಾಶಿಸ್ಟರು ಏನನ್ನೂ ಮಾಡಿಯಾರು’’ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

 ಆಗಸ್ಟ್ 4ರಂದು ಗುಪ್ಕಾರ್‌ನಲ್ಲಿ ನಡೆದ ಸರ್ವಪಕ್ಷ ಸಮಾವೇಶದಲ್ಲಿ ಕೈಗೊಳ್ಳಲಾದ ನಿರ್ಣಯವನ್ನು ಪುನರುಚ್ಚರಿಸಿದ ಅವರು ಜಮ್ಮುಕಾಶ್ಮೀರದ ಜನತೆಯ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಪಕ್ಷಗಳು ಒಗ್ಗೂಡಿ ಅಭಿಯಾನವನ್ನು ಆರಂಭಿಸಲಿವೆ ಎಂದರು. ಮೆಹಬೂಬಾ ಮುಫ್ತಿ ಅವರು ಕೂಡಾ ಶೀಘ್ರದಲ್ಲೇ ಬಿಡುಗಡೆಗೊಳ್ಳುವರು ಹಾಗೂ ಕಾಶ್ಮೀರ ಮಾತ್ರವಲ್ಲ ಜಮ್ಮು, ಲೇಹ್ ಹಾಗೂ ಕಾರ್ಗಿಲ್‌ನ ಜನತೆ ಕೂಡಾ ಈ ಹೋರಾಟದಲ್ಲಿ ನಮ್ಮಿಂದಿಗಿರುವರು ಎಂದರು.

ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿತನಾಗಿದ್ದ ತನ್ನನ್ನು ಭಯೋತ್ಪಾದಕ ಅಥವಾ ಕ್ರಿಮಿನಲ್‌ನಂತೆ ನಡೆಸಿಕೊಳ್ಳಲಾಗಿತ್ತೆಂದು ಫಾರೂಕ್ ಹೇಳಿದರು. ‘‘ನನ್ನನ್ನು ಕಾಣಲು ಬಂದ ಮಗಳಿಗೂ ಅವಕಾಶ ನೀಡಲಿಲ್ಲ. ಇದರಿಂದ ಆಘಾತಗೊಂಡ ಆಕೆ ಬಾಗಿಲಲ್ಲೇ ಬಸವಳಿದು ಬಿದ್ದಿದ್ದರು. ಆಕೆಗೆ ಹಲವಾರು ದಿನಗಳ ಕಾಲ ವೈದ್ಯರಿಂದ ಚಿಕಿತ್ಸೆ ನೀಡಬೇಕಾಯಿತು. ಇದು ಅತ್ಯಂತ ದುರಂತಮಯವಾದುದು. ಇವೆಲ್ಲವನ್ನೂ ನಾವು ಸಹಿಸಿಕೊಳ್ಳಬೇಕಾಯಿತು” ಎಂದು ಫಾರೂಕ್ ಸಂದರ್ಶನದಲ್ಲಿ ಹೇಳಿದ್ದಾರೆ.

ಲಡಾಕ್‌ನಲ್ಲಿ ನೆರೆಯ ರಾಷ್ಟ್ರ ಚೀನಾದ ಅತಿಕ್ರಮಣದ ಬಗ್ಗೆ ಪ್ರಧಾನಿಯವರ ಮೌನವನ್ನು ಫಾರೂಕ್ ಅವರು ಸಂದರ್ಶನದಲ್ಲಿ ಪ್ರಶ್ನಿಸಿದರು. ಒಂದು ವೇಳೆ ಪಾಕಿಸ್ತಾನವು ಅತಿಕ್ರಮ ನಡೆಸಿದ್ದರೆ, ಕೇಂದ್ರ ಸರಕಾರವು ದಿನವಿಡಿ ಕಿರುಚಾಡುತ್ತಲೇ ಇರುತ್ತಿತ್ತು ಎಂದವರು ಕಟಕಿಯಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News