ರಶ್ಯ ಪ್ರತಿಪಕ್ಷ ನಾಯಕ ‘ಕ್ರಿಮಿನಲ್ ಕೃತ್ಯ’ದ ಬಲಿಪಶು: ಫ್ರಾನ್ಸ್

Update: 2020-08-25 17:46 GMT

ಪ್ಯಾರಿಸ್ (ಫ್ರಾನ್ಸ್), ಆ. 25: ‘ವಿಷಪ್ರಾಶನಕ್ಕೊಳಗಾಗಿ’ ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ‘ಅಪರಾಧ ಕೃತ್ಯ’ವೊಂದರ ಬಲಿಪಶುವಾಗಿದ್ದಾರೆ ಎಂದು ಫ್ರಾನ್ಸ್ ಮಂಗಳವಾರ ಹೇಳಿದೆ ಹಾಗೂ ಈ ಘಟನೆಯ ಬಗ್ಗೆ ಕ್ಷಿಪ್ರ ತನಿಖೆ ನಡೆಸುವಂತೆ ರಶ್ಯವನ್ನು ಒತ್ತಾಯಿಸಿದೆ.

‘‘ರಶ್ಯದ ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಯೊಬ್ಬರ ವಿರುದ್ಧ ನಡೆಸಲಾದ ಈ ಕ್ರಿಮಿನಲ್ ಕೃತ್ಯದ ಬಗ್ಗೆ ಫ್ರಾನ್ಸ್ ತೀವ್ರ ಕಳವಳ ಹೊಂದಿದೆ’’ ಎಂದು ಫ್ರಾನ್ಸ್ ವಿದೇಶ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಕೃತ್ಯಕ್ಕೆ ಕಾರಣವಾದ ಸನ್ನಿವೇಶಗಳನ್ನು ಬಯಲಿಗೆಳೆಯುವ ಕ್ಷಿಪ್ರ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಹೇಳಿಕೆಯು ರಶ್ಯಕ್ಕೆ ಕರೆ ನೀಡಿದೆ.

ಜರ್ಮನಿಯ ವೈದ್ಯರು ಆತುರದಲ್ಲಿದ್ದಾರೆ: ರಶ್ಯ

ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿದೆ ಎಂದು ಹೇಳುವ ಮೂಲಕ ಜರ್ಮನಿಯ ವೈದ್ಯರು ಆತುರ ಪ್ರದರ್ಶಿಸಿದ್ದಾರೆ ಎಂದು ರಶ್ಯ ಮಂಗಳವಾರ ಹೇಳಿದೆ.

ಜರ್ಮನಿಯ ವೈದ್ಯರ ರೀತಿಯಲ್ಲೇ ರಶ್ಯದ ವೈದ್ಯರೂ ನವಾಲ್ನಿಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ನವಾಲ್ನಿಯ ಪರಿಸ್ಥಿತಿಗೆ ಏನು ಕಾರಣ ಎನ್ನುವುದನ್ನು ತಿಳಿಯಲು ಅವರಿಗೆ ಸಾಧ್ಯವಾಗಿಲ್ಲ ಎಂದು ರಶ್ಯ ಸರಕಾರದ ವಕ್ತಾರ ಡಿಮಿಟ್ಟಿ ಪೆಸ್ಕೊವ್ ಹೇಳಿದ್ದಾರೆ.

‘‘ನಮ್ಮ ವೈದ್ಯರು ಮತ್ತು ಜರ್ಮನಿಯ ವೈದ್ಯರ ವೈದ್ಯಕೀಯ ವಿಶ್ಲೇಷಣೆಯು ಪರಿಪೂರ್ಣವಾಗಿ ತಾಳೆಯಾಗುತ್ತವೆ. ಆದರೆ, ಫಲಿತಾಂಶ ಮಾತ್ರ ಭಿನ್ನವಾಗಿದೆ. ಜರ್ಮನಿಯ ವೈದ್ಯರು ಇಷ್ಟೊಂದು ಆತುರವನ್ನು ಯಾಕೆ ಹೊಂದಿದ್ದಾರೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಅವರು ಹೇಳಿರುವ ಪದಾರ್ಥ ಅವರ ದೇಹದಲ್ಲಿ ಇದೆ ಎನ್ನುವುದು ಈಗಲೂ ಖಚಿತಪಟ್ಟಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News