ಆರ್ಥಿಕ ಸ್ಥಿತಿ ಸರಿಯಾಗಲು ಸಾಕಷ್ಟು ಸಮಯ ಬೇಕು, ಬಡವರಿಗೆ ತೀವ್ರ ಸಮಸ್ಯೆಯಾಗಲಿದೆ: ಆರ್ ಬಿ ಐ ವಾರ್ಷಿಕ ವರದಿ

Update: 2020-08-26 07:19 GMT

ಹೊಸದಿಲ್ಲಿ : ಮೊದಲ ಬಾರಿಗೆ ಸಂಕುಚಿತಗೊಳ್ಳಲಿರುವ ಭಾರತದ ಆರ್ಥಿಕತೆ, ಕೋವಿಡ್-ಪೂರ್ವದಲ್ಲಿದ್ದ ಸುಸ್ಥಿತಿಗೆ ಮರಳಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದೆ ಹಾಗೂ ಬಳಕೆ  ಕ್ಷೇತ್ರಕ್ಕೆ ಉಂಟಾಗಿರುವ ಆಘಾತ ತೀವ್ರವಾಗಿದ್ದು ಬಡವರು ಅತ್ಯಂತ ಹೆಚ್ಚು ಬಾಧಿತರಾದವರಾಗಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ತನ್ನ 2019-20 ವಾರ್ಷಿಕ ವರದಿಯಲ್ಲಿ ಹೇಳಿದೆ.

ರಾಜ್ಯಗಳೇ ಮುಂದಾಳತ್ವ ವಹಿಸಿ ತಮ್ಮ ಸ್ಥಳಗಳಲ್ಲಿ ಜೂನ್ ತಿಂಗಳ ನಂತರ ಲಾಕ್ ಡೌನ್ ಹೇರಲು ಆರಂಭಿಸಿದ್ದರಿಂದ ಆರ್ಥಿಕತೆ ಮತ್ತೆ ಸುಧಾರಿಸಿಕೊಳ್ಳುವ ವೇಗ ಇನ್ನಷ್ಟು ತಗ್ಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಹಲವೆಡೆ ಲಾಕ್ ಡೌನ್ ಸಡಿಲಿಕೆಯಿಂದ ಆರ್ಥಿಕತೆ ಅಲ್ಪ ಸುಧಾರಣೆ ಕಂಡಿದ್ದರೂ ಮತ್ತೆ ಜುಲೈ ಆಗಸ್ಟ್ ನಲ್ಲಿ ಕಠಿಣ ಲಾಕ್ ಡೌನ್ ಕೆಲವೆಡೆ ಹೇರಲ್ಪಟ್ಟಿದ್ದರಿಂದ ಎರಡನೇ ತ್ರೈಮಾಸಿಕದಲ್ಲೂ ಆರ್ಥಿಕ ಚಟುವಟಿಕೆಗಳ ಕುಸಿತ ಮುಂದುವರಿಯಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಜನರು ಅನಿವಾರ್ಯವಾಗಿ ಖರ್ಚು ಮಾಡಬೇಕಾದ ಆಹಾರ, ಬಾಡಿಗೆ ಮುಂತಾದವುಗಳಿಗಾಗಿ ಮತ್ತೆ ಹೆಚ್ಚು ಹಣ ವಿನಿಯೋಗಿಸಲು ಆರಂಭಿಸಿದಾಗ ಮತ್ತೆ ಆರ್ಥಿಕ ಸುಧಾರಣೆಯಾಗುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಜುಲೈ ತಿಂಗಳಲ್ಲಿ ರಿಸರ್ವ್ ಬ್ಯಾಂಕ್ ನಡೆಸಿದ ಸಮೀಕ್ಷೆ ಪ್ರಕಾರ ಗ್ರಾಹಕರಿಗೆ ಅರ್ಥವ್ಯವಸ್ಥೆಯ ಮೇಲಿದ್ದ ವಿಶ್ವಾಸ ಕಡಿಮೆಯಾಗಿದ್ದು ಉದ್ಯೋಗ, ಹಣದುಬ್ಬರ ಹಾಗೂ ಕಡಿಮೆ ಆದಾಯ ಇದಕ್ಕೆ ಕಾರಣವಾಗಿದೆ, ಆದರೆ ಮುಂದೆ ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆಯನ್ನು ಜನರು ವ್ಯಕ್ತಪಡಿಸಿದ್ದಾರೆ.

ಈ ಕೋವಿಡ್ ಸಾಂಕ್ರಾಮಿಕ ಹೊಸ ಅಸಮಾನತೆಗಳನ್ನೂ ಬಹಿರಂಗಗೊಳಿಸಿದೆ, ಬಿಳಿ ಕಾಲರ್ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಸವಲತ್ತು ಪಡೆದರೆ, ಅಗತ್ಯ ವಸ್ತುಗಳ ಕ್ಷೇತ್ರಗಳಲ್ಲಿ ದುಡಿಯುವವರು ತಮ್ಮ ಕೆಲಸದ ಸ್ಥಳಗಳಿಗೇ ಹೋಗುವ ಅನಿವಾರ್ಯತೆಯಿರುವುದರಿಂದ ಸೋಂಕು ತಗಲುವ ಸಾಧ್ಯತೆಯೂ ಅವರಿಗೆ ಅಧಿಕವಾಗಿದೆ ಎಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿ ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News