ಹೊಸ ಮರಳು ನೀತಿಯಿಂದ ಅಕ್ರಮಕ್ಕೆ ಪ್ರಚೋದನೆ : ರಮಾನಾಥ ರೈ
ಮಂಗಳೂರು, ಆ. 26: ರಾಜ್ಯ ಸರಕಾರವು ಹೊಸ ಮರಳು ನೀತಿಯ ಮೂಲಕ ಮರಳುಗಾರಿಕೆಯನ್ನು ಕರ್ನಾಟಕ ರಾಜ್ಯ ಗಣಿ ನಿಗಮಕ್ಕೆ ನೀಡಲು ಮುಂದಾಗಿರುವುದು ಅಕ್ರಮ ಮರಳುಗಾರಿಕೆಗೆ ಪ್ರಚೋದನೆ ನೀಡಿದಂತಾಗುತ್ತದೆ ಮತ್ತು ಇದರಿಂದ ಸಾಂಪ್ರದಾಯಿಕ ಮರಳುಗಾರಿಕೆಗೆ ತೊಂದರೆ ಆಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದ ಸಂದರ್ಭ ಮರಳು ತೆರವು ಯೋಜನೆಯಡಿ ಕೇಂದ್ರದ ಪರಿಸರ ಇಲಾಖೆಯ ಅನುಮತಿ ಪಡೆದು ಸಿಆರ್‌ಝೆಡ್‌ನಡಿ ಮರಳು ತೆಗೆುುವ ಅವಕಾಶ ಕಲ್ಪಿಸಿತ್ತು ಎಂದರು.
ಇದರಿಂದ 2011ಕ್ಕೆ ಪೂರ್ವದಲ್ಲಿ ಮರಳುಗಾರಿಕೆ ಪರವಾನಿಗೆ ಹೊಂದಿದವರಿಗೆ ಹಿರಿತನದ ಆಧಾರದಲ್ಲಿ 105 ಮಂದಿಗೆ ಪರವಾನಿಗೆ ನೀಡುವ ವ್ಯವಸ್ತೆಯನ್ನು ಅಂದಿನ ಜಿಲ್ಲಾಧಿಕಾರಿ ದ.ಕ.ಜಿಲ್ಲೆಯಲ್ಲಿ ಕಲ್ಪಿಸಿದ್ದರು. ಉಳಿದಂತೆ ಸಿಆರ್‌ಝೆಡೇತರ ಪ್ರದೇಶದಲ್ಲಿ ಮರಳುಗಾರಿಕೆಗೆ ಟೆಂಡರ್ ಕಂ ಹರಾಜು ಪ್ರಕ್ರಿಯೆಯನ್ನು ಗ್ರಾಮದಿಂದ ತಾಲೂಕಿಗೆ ವಿಸ್ತರಿಸಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದರಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ರಾಜಧನವನ್ನೂ ಸಂಗ್ರಹಿಸಲಾಗಿತ್ತು ಎಂದು ಅವರು ಹೇಳಿದರು.
ಇದೀಗ ಬಿಜೆಪಿ ಸರಕಾರ ಬಂಡವಾಳ ಶಾಹಿಗಳಿಗೆ ಮರಳುಗಾರಿಕೆಯನ್ನು ಒದಗಿಸುವ ಉದ್ದೇಶದಿಂದ ಹೊಸ ಮರಳು ನೀತಿಯ ಹುನ್ನಾರ ನಡೆಸಿದ್ದು, ಇದರಿಂದ ಸಾಂಪ್ರದಾಯಿಕ ಮರಳುಗಾರರು ತೊಂದರೆ ಅನುಭವಿಸಲಿದ್ದಾರೆ ಎಂದರು.
ಸದ್ಯ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಕಾಣುತ್ತಿಲ್ಲ. ಇದಕ್ಕೆ ಕಾರಣ ಅಕ್ರಮ ಮರಳುಗಾರಿಕೆ ಅವ್ಯಾವಹತವಾಗಿ ನಡೆಯುತ್ತಿರುವುದು. ಸಿಆರ್‌ಝೆಡೇತರ ಕೆಲ ಹೊಸ ಬ್ಲಾಕ್‌ಗಳಲ್ಲೂ ಮರಳುಗಾರಿಕೆ ನಡೆಯುತ್ತಿದೆ. ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಮರಲುಗಾರಿಕೆ ಪರವಾನಿಗೆ ನೀಡಲಾಗಿಲ್ಲ. ಹಾಗಿದ್ದರೂ ಶಾಸಕರಾದಿಯಾಗಿ ಸಹಕಾರದೊಂದಿಗೆ ಬಿಜೆಪಿಯ ಧೋರಣೆಯಿಂದ ಕಳೆದ ಒಂಭತ್ತು ತಿಂಗಳಿನಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.
ಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಹರಿನಾಥ್, ಶಶಿಧರ ಹೆಗ್ಡೆ, ಕವಿತಾ ಸನಿಲ್, ಮುಖಂಡರಾದ ನವೀನ್ ಡಿಸೋಜಾ, ಪ್ರಥ್ವಿರಾಜ್, ಸದಾಶಿವ ಉಳ್ಳಾಲ್, ಶುಭೋದಯ ಆ್ವ, ನೀರಜ್ ಪಾಲ್ ಉಪಸ್ಥಿತರಿದ್ದರು.
ಅಡುಗೆ ಅನಿಲ ಸಬ್ಸಿಡಿ ರದ್ದತಿ ಬಗ್ಗೆ ಸ್ಪಷ್ಟನೆ ನೀಡಲು ಒತ್ತಾಯ
ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ, ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ. ಇದೇ ವೇಳೆ ಅಡುಗೆ ಅನಿಲ ಸಬ್ಸಿಡಿಯನ್ನೂ ರದ್ದುಪಡಿಸಲಾಗಿದೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಒತ್ತಾಯಿಸಿದರು.
ಅಕ್ರಮ ಮರಳುಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಿಆರ್‌ಝೆಡ್ ಹಾಗೂ ಸಿಆರ್‌ಝೆಡೇತರದಲ್ಲಿ ಮಾಡಲಾದ ಮರಳು ನೀತಿಯಿಂದಾಗಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ರಾಜಧನ ಸಂಗ್ರಹವಾಗಿದೆ. ನಮ್ಮ ವಿರುದ್ಧ ಸಾಕಷ್ಟು ಅಪವಾದ ಮಾಡಲಾಗಿದ್ದರೂ ಈ ಅವಧಿಯಲ್ಲಿ ಸರಕಾರದ ಬೊಕ್ಕಸಕ್ಕೆ ರಾಜಧನ ಸಂಗ್ರಹವಾಗಿದೆ. 2013-14ನೆ ಅವಧಿಯಲ್ಲಿ 3.13 ಕೋಟಿ ರೂ., 2014-15ರಲ್ಲಿ 3.47 ಕೋಟಿರೂ., 15-16ರಲ್ಲಿ 5.11 ಕೋಟಿ ರೂ., 2016-17ರಲ್ಲಿ 3.15 ಕೋಟಿ ರೂ., 2017-18ರಲ್ಲಿ 3.49 ಕೋಟಿ ರೂ., 18-19ರಲ್ಲಿ 4.08 ಕೋಟಿ ರೂ., 19-20ರಲ್ಲಿ 5.25 ಕೋಟಿ ರೂ. ಗೌರವಧನ ಸಂಗ್ರಹವಾಗಿದ್ದರೆ, 20-21ರ ಅವಧಿಯಲ್ಲಿ ಜುಲೈವರೆಗೆ 1.54 ಕೋಟಿ ರೂ. ಗೌರವಧನ ಸಂಗ್ರಹವಾಗಿದೆ. ಪ್ರಸ್ತುತ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.