ಸ್ವಾತಂತ್ರ್ಯ ಹೋರಾಟಗಾರ ಸಿ.ಎಚ್. ಜಾಕೋಬ್ ಕುರಿತ ಕೃತಿ ಬಿಡುಗಡೆ
ಮಂಗಳೂರು, ಆ.26: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿದ್ದ, ಬರಹಗಾರರೂ ಆಗಿರುವ ಸಿ.ಎಚ್. ಜಾಕೋಬ್ ಲೋಬೋರವರ ಜೀವನ ಹಾಗೂ ಸಾಧನೆ ಕುರಿತ ಪುಸ್ತಕ ‘ಅನುಭೂತಿ’ ಇಂದು ಬಿಡುಗಡೆಗೊಂಡಿತು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಕೃತಿ ಬಿಡುಗಡೆಗೊಳಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸಿ.ಎಚ್. ಜಾಕೋಬ್, ತಮ್ಮ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಅನುಭೂತಿ ಪುಸ್ತಕವನ್ನು ಬೆಂಗಳೂರಿನಲ್ಲಿ ಜಾಕೋಬ್ ಲೋಬೋರಿಗೆ 90 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೂನ್ 20ರಂದು ಅವರ ಸ್ವಗ್ರಹದಲ್ಲಿಯೇ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ದ.ಕ. ಜಿಲ್ಲೆ ಹಾಗೂ ಮಂಗಳೂರು ಜಾಕೋಬ್ ಅವರ ಕಾರ್ಯಕ್ಷೇತ್ರವಾಗಿದ್ದರಿಂದ ಅವರು ಸೇವಾವಧಿಯ ಹೆಚ್ಚಿನ ಸಮಯ ಇಲ್ಲಿ ಕಳೆದಿದ್ದರಿಂದ ಇಂದು ಮತ್ತೆ ಪ್ರೆಸ್‌ಕ್ಲಬ್‌ನಲ್ಲಿ ಪುಸ್ತಕವನ್ನು ಅಧಿಕೃತ ವಾಗಿ ಬಿಡುಗಡೆಗೊಳಿಸುತ್ತಿರುವುದಾಗಿ ಶ್ರೀನಿವಾಸ್ ಕೌಶಿಕ್ ತಿಳಿಸಿದರು.
ಕೃತಿಕಾರ ಶ್ರೀನಿವಾಸ ಕೌಶಿಕ್, ಸಿ.ಎಚ್. ಜಾಕೋಬ್ ಲೋಬೋ, ಕಲಾವಿದ ತಮ್ಮ ಲಕ್ಷ್ಮಣ ಮೊದಲಾದರು ಈ ಸಂದರ್ಭ ಉಪಸ್ಥಿತರಿದ್ದರು.