×
Ad

273 ವೈದ್ಯರು ಕೋವಿಡ್‍ಗೆ ಬಲಿಯಾಗಿದ್ದಾರೆ; ಸರಕಾರದ ಪರಿಹಾರವಿನ್ನೂ ತಲುಪಿಲ್ಲ: ಭಾರತೀಯ ವೈದ್ಯಕೀಯ ಸಂಘದ ದೂರು

Update: 2020-08-26 15:12 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸುಮಾರು 273 ವೈದ್ಯರು ಅದೇ ಸೋಂಕಿಗೆ ಬಲಿಯಾಗಿದ್ದರೂ ಕೇಂದ್ರ ಪ್ರಾಯೋಜಿತ ಸವಲತ್ತುಗಳು ಅವರ ಕುಟುಂಬಗಳನ್ನು ತಲುಪಿಲ್ಲ ಎಂದು  ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಪ್ರಧಾನ ಕಾರ್ಯದರ್ಶಿ ಡಾ ಆರ್ ವಿ ಅಶೋಕನ್ ದೂರಿದ್ದಾರೆ.

ಕೇಂದ್ರದ ಯೋಜನೆಯಲ್ಲಿ ಖಾಸಗಿ ವೈದ್ಯರನ್ನು ಸೇರಿಸಲಾಗಿಲ್ಲ ಎಂದು ಹೇಳಿದ ಅವರು ಈ ಕುರಿತು  ಪ್ರಧಾನಿಗೆ ತಮ್ಮ ಸಂಘ ಎರಡು ವಾರಗಳ ಹಿಂದೆಯೇ ಪತ್ರ ಬರೆದಿದ್ದರೂ ಅವರು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ ಎಂದು 'theprint.in'ಗೆ ನೀಡಿದ ಸ್ಕೈಪ್ ಸಂದರ್ಶನದಲ್ಲಿ ಡಾ. ಅಶೋಕನ್ ಹೇಳಿದ್ದಾರೆ.

"ಕೋವಿಡ್ ವಿರುದ್ಧ ಹೋರಾಡುವಾಗ ಅದೇ ಸೋಂಕಿಗೆ ಬಲಿಯಾದ ಸರಕಾರಿ ವೈದ್ಯರುಗಳ ಕುಟುಂಬಗಳಿಗೆ ಮಾತ್ರ ರೂ. 50 ಲಕ್ಷ ಪರಿಹಾರ ಒದಗಿಸಲಾಗುತ್ತಿದೆ. ಖಾಸಗಿ ವೈದ್ಯರಿಗೂ ಈ ಸೌಲಭ್ಯ ಒದಗಿಸಬೇಕು, ಈ ಸಾಂಕ್ರಾಮಿಕ ಎಲ್ಲರನ್ನೂ ಸಮಾನವಾಗಿ ಬಾಧಿಸುತ್ತಿರುವಾಗ  ಸವಲತ್ತುಗಳು ಹಾಗೂ ಪರಿಹಾರ ಮೊತ್ತಗಳಲ್ಲಿ ವ್ಯತ್ಯಾಸವೇಕೆ?,'' ಎಂದೂ ಅವರು ಪ್ರಶ್ನಿಸಿದ್ದಾರೆ.

ಅಶೋಕನ್ ಹಾಗೂ ಐಎಂಎ ಅಧ್ಯಕ್ಷ ರಾಜೇಶ್ ಭೂಷಣ್ ಅವರು ಆಗಸ್ಟ್ 8ರಂದು ಪ್ರಧಾನಿಗೆ ಪತ್ರ ಬರೆದಿದ್ದರು. "ಆಗ ಕೋವಿಡ್ ಗೆ ಬಲಿಯಾದ ವೈದ್ಯರ ಸಂಖ್ಯೆ 196 ಆಗಿದ್ದರೆ ಈಗ ಅದು 273 ಆಗಿದೆ, ಆದರೂ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆಯಿಲ್ಲ,'' ಎಂದು ಅವರು ಹೇಳಿದ್ದಾರೆ.

ಎಲ್ಲಾ ವಲಯಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೂ ಸರಕಾರ ಒದಗಿಸುವ ಆರೋಗ್ಯ ಮತ್ತು ಜೀವವಿಮಾ ಸವಲತ್ತುಗಳನ್ನು ವಿಸ್ತರಿಸಬೇಕು ಎಂಬುದು ಸಂಘದ ಆಗ್ರಹವಾಗಿದೆ.

ಖಾಸಗಿ ವೈದ್ಯರು ತೀವ್ರ ಬಾಧಿತ: "ಐಎಂಎ ತನ್ನದೇ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ದೇಶದಾದ್ಯಂತ ಸುಮಾರು 1,096 ವೈದ್ಯರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಇವರ ಪೈಕಿ 901 ಮಂದಿ ಸೇವೆ ಸಲ್ಲಿಸುತ್ತಿರುವ ವೈದ್ಯರಾಗಿದ್ದರೆ ಉಳಿದವರು ಹೌಸ್ ಸರ್ಜನ್ ಹಾಗೂ ಇತರರಾಗಿದ್ದಾರೆ. ಸೇವೆ ಸಲ್ಲಿಸುತ್ತಿರುವ 901 ಮಂದಿಯ ಪೈಕಿ 273 ಮಂದಿ ಕರ್ತವ್ಯದಲ್ಲಿರುವಾಗ ಕೋವಿಡ್‍ಗೆ ಬಲಿಯಾಗಿದ್ದಾರೆ. ಮರಣ ಪ್ರಮಾಣ ಸೋಂಕಿತ ಖಾಸಗಿ ವೈದ್ಯರಲ್ಲಿ ಶೇ. 15ರಷ್ಟಿದ್ದರೆ ಸೋಂಕಿತ ಸರಕಾರಿ ವೈದ್ಯರ ಕೋವಿಡ್ ಮರಣ ಪ್ರಮಾಣ ಶೇ. 8ರಷ್ಟಿದೆ'' ಎಂದು ಡಾ ಅಶೋಕನ್ ಹೇಳಿದ್ದಾರೆ. ಮೃತಪಟ್ಟವರ ಪೈಕಿ ಶೇ. 40 ಮಂದಿ ಜನರಲ್ ಪ್ರಾಕ್ಟೀಶನರ್ಸ್ ಆಗಿದ್ದಾರೆಂದೂ  ಅವರು ಹೇಳಿದ್ದಾರೆ.

ಕೇಂದ್ರ ಸರಕಾರ ವೈದ್ಯರ ಬೇಡಿಕೆಗಳಿಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದ್ದರೂ ಕೆಲ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪರಿಹಾರ ಘೊಷಿಸಿವೆ ಆದರೆ ಇವುಗಳು ಬಾಧಿತ ಕುಟುಂಬಗಳಿಗೆ ತಲುಪಿವೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News