×
Ad

ಮರವಂತೆ ಸಮುದ್ರದಲ್ಲಿ ದೋಣಿ ಪಲ್ಟಿ: ಓರ್ವ ಮೀನುಗಾರನಿಗೆ ಗಾಯ ; ಮೂವರ ರಕ್ಷಣೆ

Update: 2020-08-26 15:33 IST

ಬೈಂದೂರು, ಆ.26: ಮರವಂತೆ ಸಮುದ್ರದಲ್ಲಿ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿದ ಪರಿಣಾಮ ಓರ್ವ ಮೀನುಗಾರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅವಘಡದಲ್ಲಿ ಕಾಲಿಗೆ ತೀವ್ರವಾಗಿ ಗಾಯಗೊಂಡಿರುವ ದೋಣಿ ಮಾಲಕ ಗಂಗೊಳ್ಳಿಯ ಶ್ರೀನಿವಾಸ್ ಖಾರ್ವಿ(50) ಎಂಬವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ದೋಣಿಯಲ್ಲಿದ್ದ ಇತರ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀನಿವಾಸ ಖಾರ್ವಿ ಮಾಲಕತ್ವದ ‘ಆದಿ ಆಂಜನೇಯ’ ಹೆಸರಿನ ದೋಣಿ ಯಲ್ಲಿ ಶ್ರೀನಿವಾಸ ಖಾರ್ವಿ ಸೇರಿದಂತೆ ಒಟ್ಟು ನಾಲ್ವರು ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಮರವಂತೆ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ದೋಣಿಯು ಅಲೆಗಳ ರಭಸಕ್ಕೆ ದಿಬ್ಬಕ್ಕೆ ಹೊಡೆದು ಮಗುಚಿ ಬಿತ್ತೆನ್ನಲಾಗಿದೆ.

ಕೂಡಲೇ ದೋಣಿಯಲ್ಲಿದ್ದ ನಾಲ್ವರು ಈಜಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಈ ವೇಳೆ ದೋಣಿಯು ಶ್ರೀನಿವಾಸ ಖಾರ್ವಿ ಅವರ ಕಾಲಿನ ಮೇಲೆ ಬಿತ್ತೆನ್ನಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ 24X7 ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವೇಳೆ ದೋಣಿಯ ಎರಡು ಇಂಜಿನ್‌ಗಳು ಸಮುದ್ರ ಪಾಲಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News