ಭಾರತದಲ್ಲಿ ಸಾವಿರಾರು ಉದ್ಯೋಗಿಗಳನ್ನು ಕೈಬಿಡಲಿರುವ ಅಕ್ಸೆಂಚರ್
ಹೊಸದಿಲ್ಲಿ: ಐಟಿ ಸಂಸ್ಥೆ ಅಕ್ಸೆಂಚರ್ ಜಗತ್ತಿನಾದ್ಯಂತ ಇರುವ ತನ್ನ 5 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಪೈಕಿ ಕನಿಷ್ಠ ಶೇ 5ರಷ್ಟು ಉದ್ಯೋಗಿಗಳನ್ನು ಕೈಬಿಡಲು ನಿರ್ಧರಿಸಿದೆಯೆನ್ನಲಾಗಿದ್ದು ಈಗಾಗಲೇ ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸುವ ಭಾರತದಲ್ಲಿ ಕಂಪೆನಿಯ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಆಸ್ಟ್ರೇಲಿಯನ್ ಫೈನಾನ್ಶಿಯಲ್ ರಿವೀವ್‍ನಲ್ಲಿ ಈ ಕುರಿತ ಮೊದಲ ವರದಿ ಬಂದಿದ್ದು ಕಂಪೆನಿಯ ಸಿಇಒ ಜೂಲಿ ಸ್ವೀಟ್ ಅವರು ಆಗಸ್ಟ್ ಮಧ್ಯಭಾಗದಲ್ಲಿ ನಡೆಸಿದ ಆಂತರಿಕ ಸಭೆಯಲ್ಲಿ ಲೇ-ಆಫ್ ಕುರಿತು ಸುಳಿವು ನೀಡಿದ್ದರೆನ್ನಲಾಗಿದೆ. ಭಾರತದಲ್ಲಿ ಸಂಸ್ಥೆಯ ಸುಮಾರು 2 ಲಕ್ಷ ಉದ್ಯೋಗಿಗಳಿದ್ದಾರೆ.
“ನಮ್ಮ ಎಲ್ಲಾ ಘಟಕಗಳಲ್ಲಿ ಹಾಗೂ ಎಲ್ಲಾ ಹಂತದ ಉದ್ಯೋಗಿಗಳ ಪೈಕಿ ಕನಿಷ್ಠ ಕಾರ್ಯನಿರ್ವಹಣೆ ತೋರುವ ಶೇ. 5ರಷ್ಟು ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಕೈಬಿಡಲಾಗುವ ಪ್ರಕ್ರಿಯೆ ಪ್ರತಿ ವರ್ಷ ನಡೆಯುತ್ತದೆ,” ಎಂದು ಕಂಪೆನಿ ಹೇಳಿಕೊಂಡಿದೆ.
ಆದರೆ ಇತ್ತೀಚೆಗೆ ನಡೆದ ಸಭೆಯಲ್ಲಿ ಕಂಪೆನಿಯ ಸಿಇಒ ಮಾತನಾಡುತ್ತಾ ``ಪ್ರತಿ ವರ್ಷ ನಾವು ಶೇ. 5ರಷ್ಟು ಮಂದಿಯನ್ನು ಕೈಬಿಟ್ಟು ಅವರ ಬದಲಿಗೆ ಹೊಸಬರ ನೇಮಕಾತಿ ಮಾಡುತ್ತಿದ್ದೆವು. ಇದು ಬೇಡಿಕೆ ಇದ್ದಂತಹ ಸನ್ನಿವೇಶದಲ್ಲಿ. ಆಧರೆ ಈಗ ಪರಿಸ್ಥಿತಿ ಹಾಗಿಲ್ಲ,'' ಎಂದು ಹೇಳಿದ್ದಾರೆಂದು ವರದಿಯಾಗಿದೆ.