ಕೋವಿಡ್ ಸೋಂಕಿತ ಆಂಧ್ರ ಕಾಂಗ್ರೆಸ್ ನಾಯಕ ಆತ್ಮಹತ್ಯೆ
ಕಡಪ: ಆಂಧ್ರ ಪ್ರದೇಶದ ಕಡಪ ಜಿಲ್ಲೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಕೋವಿಡ್ ಸೋಂಕು ತಗಲಿದ ನಂತರ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಐವತ್ತೈದು ವರ್ಷದ ಕಾಂಗ್ರೆಸ್ ನಾಯಕ ಕಡಪ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿದ್ದು ಎರ್ರಕುಂಟ್ಲ ಮಂಡಲದ ಚಿಲಂಕುರು ಪ್ರದೇಶದವರಾಗಿದ್ದಾರೆ. ಇತ್ತೀಚೆಗೆ ಕೋವಿಡ್ ಸೋಂಕು ದೃಢಪಟ್ಟ ನಂತರ ಅವರು ಪ್ರೊಡ್ಡುತ್ತೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸೋಮವಾರ ಸಂಜೆ ಅವರು ಆಸ್ಪತ್ರೆಯಿಂದ ಹೊರನಡೆದಿದ್ದರು. ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿ ವಿಫಲರಾಗಿದ್ದರು. ಆಸ್ಪತ್ರೆ ಮಾಲಕ ತನ್ನ ಸ್ನೇಹಿತನಾಗಿದ್ದು ಅವರ ಜತೆ ಮಾತನಾಡಲು ತೆರಳಿದ್ದಾಗಿ ಅವರು ಹೇಳಿದ್ದರು ಎನ್ನಲಾಗಿದೆ.
ಆಸ್ಪತ್ರೆಯ ಆಡಳಿತ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಮಂಗಳವಾರ ರಾತ್ರಿ ಕಾಂಗ್ರೆಸ್ ನಾಯಕನ ಮೃತದೇಹ ಸುನ್ನಪುರಲ್ಲಪಲ್ಲೆ ಎಂಬಲ್ಲಿನ ರೈಲ್ವೆ ಹಳಿಗಳ ಸಮೀಪ ಪತ್ತೆಯಾಗಿತ್ತು. ಮೃತ ವ್ಯಕ್ತಿ ಸುಸೈಡ್ ನೋಟ್ ಕೂಡ ಬರೆದಿದ್ದು ತನ್ನ ಸಾವಿಗೆ ಯಾರೂ ಕಾರಣರಲ್ಲ, ಕೋವಿಡ್ ಸೋಂಕಿನಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿದ್ದಾಗಿ ಅವರು ಅದರಲ್ಲಿ ಬರೆದಿದ್ದಾರೆ.