ಮೋದಿ ಸರಕಾರದಿಂದ ಸಂವಿಧಾನಾತ್ಮಕ ಸಂಸ್ಥೆಗಳ ಖರೀದಿ: ವಿದ್ಯಾ ಬಾಲಕೃಷ್ಣ ಆರೋಪ
ಉಡುಪಿ, ಆ.26: ಎನ್‌ಆರ್‌ಸಿ ಹಾಗೂ ಸಿಎಎಯಂತಹ ಕಾಯಿದೆಗಳ ತಿದ್ದುಪಡಿ ಮೂಲಕ ಮೋದಿ ಸರಕಾರ ದೇಶದ ಜನರನ್ನು ವಿಭಜಿಸುವ ಕಾರ್ಯ ನಡೆಸುತ್ತಿದೆ. ದೇಶದ ಸಂವಿಧಾನಾತ್ಮಕ ಸಂಸ್ಥೆಗಳಾದ ಇಡಿ, ಚುನಾವಣಾ ಆಯೋಗ, ಆರ್‌ಬಿಐ, ಸಿಬಿಐ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನೇ ಖರೀದಿಸಿ ತನ್ನ ಕೈಗೊಂಬೆಯಾಗಿಸಿಕೊಂಡಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿದ್ಯಾ ಬಾಲಕೃಷ್ಣ ಆರೋಪಿಸಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರಧಾನಿ ಮೋದಿ ಅಧಿಕಾರಕ್ಕೇರುವ ಮೊದಲು ಜನರಿಗೆ ನೀಡಿರುವ ಭರವಸೆಯನ್ನು ಈಡೇರಿಸದೆ ಮೋಸ ಮಾಡಿದ್ದಾರೆ. ತೈಲ ಬೆಲೆ ಇಂದು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಜನರ ಬದುಕು ದುಸ್ತರ ಆಗುತ್ತಿದೆ. ಇಡೀ ದೇಶವನ್ನು ಮೋದಿ ಬಂಡವಾಳಶಾಹಿಗಳ ಕೈಗೆ ಒಪ್ಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಇಂದು ಕೊರೋನ ಎಂಬುದು ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಈ ಮೂಲಕ ಇಡೀ ರಾಜ್ಯ ಅವ್ಯವಹಾರದ ಕೂಪವಾಗಿ ಬಿಟ್ಟಿದೆ. ಕೊರೋನ ಚಿಕಿತ್ಸಾ ಸಲಕರಣೆಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿಸುವ ಮೂಲಕ ಭ್ರಷ್ಟಾ ಚಾರ ಎಸಗಲಾಗಿದೆ. ರಾಜ್ಯ ಮಂತ್ರಿಗಳು ವರ್ಗಾವಣೆ ದಂಧೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಧಿಕಾರಿಗಳು ಸರಕಾರದ ಕೈಗೊಂಬೆ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊರೋನ ಸಂಕಷ್ಟದ ಸಂದರ್ಭದಲ್ಲಿ ಜನರ ಹಸಿವು ತಣಿಸುವ ಕಾರ್ಯವನ್ನು ದೇವಸ್ಥಾನ, ದೈವಸ್ಥಾನ, ಮಸೀದಿ, ಚರ್ಚ್, ಸಂಘಸಂಸ್ಥೆಗಳು ಮಾಡಿವೇ ಹೊರತು ಸರಕಾರ ಅಲ್ಲ. ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಅವಿಭಜಿಕ ದ.ಕ. ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡಲಾ ಗುವುದು ಎಂದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಯುವ ಕಾಂಗ್ರೆಸ್ ಮುಖಂಡರಾದ ಸುಹೆಲ್ ಕಂದಕ್, ಅಬ್ದುಲ್ ಅಝೀಝ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ರಮೇಶ್ ಹೆಗ್ಡೆ, ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಯೋಗೀಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ.ಅಮೀನ್ ಸ್ವಾಗತಿಸಿದರು.
ಮರಳು ದಂಧೆಯಲ್ಲಿ ಶಾಸಕರು
ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಇದರಲ್ಲಿ ಶಾಸಕರು ಹಾಗೂ ಅವರ ಸಹಚರರು ತೊಡಗಿಸಿಕೊಂಡಿದ್ದಾರೆ. ಕೆಲಸ ಇಲ್ಲದ ಒಬ್ಬರು ಶಾಸಕರು ಮರಳು ದಂಧೆ ನಡೆಸಿದರೆ ಮತ್ತೊಬ್ಬ ಶಾಸಕರು ಸಿಮೆಂಟ್ ಹಗರಣ ಮಾಡುತ್ತಿದ್ದಾರೆ. ಈ ಮೂಲಕ ಸರಕಾರದ ಖಜಾನೆ ಲೂಟಿ ಮಾಡುವ ಕಾರ್ಯದಲ್ಲಿ ಇವರೆಲ್ಲ ತೊಡಗಿಸಿಕೊಂಡಿದ್ದಾರೆ ಎಂದು ಮಿಥುನ್ ರೈ ಟೀಕಿಸಿದರು.